ಮಂಗಳೂರು: ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಆದಿತ್ಯ ರಾವ್ ಅವರನ್ನು ಪೊಲೀಸರು ತೀವ್ರ ತನಿಖೆಗೆ ಒಳಪಡಿಸಿದ್ದಾರೆ.
ನಗರದ ಬೆಂದೂರ್‌ನ ಬೆಥನಿ ಕಾನ್ವೆಂಟ್ ಹಿಂಭಾಗದಲ್ಲಿರುವ ಆದಿತ್ಯ ರಾವ್ ಬಾಡಿಗೆ ಮನೆ, ಆತ ಕೆಲವು ವಸ್ತುಗಳನ್ನು ಖರೀದಿಸಿದ್ದ ಹಾರ್ಡ್‌ವೇರ್ ಅಂಗಡಿ ಹಾಗೂ ಬ್ಯಾಂಕ್ ಲಾಕರ್ ಗಳಲ್ಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಬೆಂದೂರ್‌ನ ಬೆಥನಿ ಕಾನ್ವೆಂಟ್ ಹಿಂಭಾಗದಲ್ಲಿ ಬಾಡಿಗೆ ಮನೆಗೆ ಅದಿತ್ಯ ರಾವ್ ಅವರನ್ನ ಕರೆದೊಯ್ದ ಎಸಿಪಿ ಕೆ.ಯು.ಬೆಳ್ಳಿಯಪ್ಪ ನೇತೃತ್ವದ ತನಿಖಾ ತಂಡ, ತೀವ್ರ ಶೋಧ ನಡೆಸಿತು. ಆ ಕೊಠಡಿಯಲ್ಲಿ ಪತ್ತೆಯಾದ ಕೆಲವು ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸ್ಫೋಟಕ ಸಾಮಗ್ರಿಗಳನ್ನು ತಯಾರಿಸಲು ಕದ್ರಿ ದ್ವಾರದ ಬಳಿಯ ಹಾರ್ಡ್‌ವೇರ್ ಅಂಗಡಿಯೊಂದರಲ್ಲಿ ಕೆಲವು ವಸ್ತುಗಳನ್ನು ಖರೀದಿಸಿರುವುದಾಗಿ ಆದಿತ್ಯ ರಾವ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಅದರಂತೆ ಪೊಲೀಸರು ಆರೋಪಿಯನ್ನು ಅಲ್ಲಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಿ ಅಂಗಡಿ ಮಾಲೀಕರು ಮತ್ತು ನೌಕರರ ಹೇಳಿಕೆ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ ಬ್ಯಾಂಕ್‌ನ ಕದ್ರಿ ಶಾಖೆಯಲ್ಲಿ ಆರೋಪಿ ಆದಿತ್ಯ ರಾವ್ ಇನ್ನೊಂದು ಲಾಕರ್ ಹೊಂದಿರುವುದು ತನಿಖೆ ವೇಳೆ ಬಹಿರಂಗಗೊಂಡಿತ್ತು. ಅಲ್ಲಿಗೂ ಆತನನ್ನು ಕರೆದೊಯ್ದ ತನಿಖಾ ತಂಡ, ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ಲಾಕರ್ ತೆರೆದು, ಅದರಲ್ಲಿದ್ದ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.