ಮಂಗಳೂರು: ದೇಶದಲ್ಲಿ ರೈತರು ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೊಳಿಸಲಾಗುತ್ತಿದೆ. ಈಗಾಗಲೇ ರೈತರು ಬಿಜೆಪಿ ಸರ್ಕಾರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ದೇಶಾದ್ಯಂತ ಎಲ್ಲಾ ರೈತರು, ಕಾರ್ಮಿಕರು ಕೇಂದ್ರದ ವಿರುದ್ಧ ಸಿಡಿದೆದ್ದರೆ 24 ಗಂಟೆಯೊಳಗೆ ಬಿಜೆಪಿ ಸರ್ಕಾರ ಬೀಳಲಿದೆ ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಹೇಳಿದರು.
ನಗರದ ಮಿನಿ ವಿಧಾನಸೌಧದ ಮುಂಭಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕಾರ್ಮಿಕರಿಗೆ ಎಂಟು ಗಂಟೆಗಳ ಕಾಲ ದುಡಿಮೆ ಕೇವಲ ಭಾರತದ ಕಾನೂನಲ್ಲ. ಪ್ರಪಂಚದಾದ್ಯಂತ ಇದೇ ಕಾನೂನು ಇರುವುದು. ಆದರೆ ಅಮಿತ್ ಶಾ ಹಾಗೂ ಮೋದಿ ಸರ್ಕಾರ 8 ಗಂಟೆ ಬದಲು 12 ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಕಾರ್ಮಿಕ ಕಾನೂನು ತಿದ್ದುಪಡಿ ಮಾಡಲು ಹೊರಟಿದೆ. ಮೋದಿಯವರು ಹಿಂದೆ ಎಷ್ಟು ಗಂಟೆಗಳ ಕಾಲ ಚಹಾ ಮಾರಾಟ ಮಾಡಿದ್ದಾರೆಂದು ಮೊದಲು ಸ್ಪಷ್ಟಪಡಿಸಲಿ ಎಂದರು.
ಸರ್ಕಾರ ಜಾರಿಗೊಳಿಸುವ ಕಾನೂನುಗಳು ಪ್ರಜಾಪ್ರಭುತ್ವ ಮಾದರಿಯಲ್ಲಿ ಚರ್ಚೆಯಾಗಿ ಜನಸಾಮಾನ್ಯರು ಅದನ್ನು ಒಪ್ಪಿಕೊಂಡ ಬಳಿಕ ಆ ಕಾನೂನು ಸಂಸತ್ನಲ್ಲಿ ಜಾರಿಯಾಗಬೇಕು. ಆದರೆ ಈಗ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಯಾವುದೇ ಕಾನೂನುಗಳ ಚರ್ಚೆಗೆ ಅವಕಾಶ ಇಲ್ಲ. ಅಧಿಕಾರ, ಬಹುಮತ ಇದೆ ಎಂದು ಬಿಜೆಪಿ ಸರ್ಕಾರ ಕಾಯ್ದೆಗಳನ್ನು ಜಾರಿಗೊಳಿಸುತ್ತಿರುವುದು ಮಾರಕ. ಆದ್ದರಿಂದ ಬಿಜೆಪಿ ಸರ್ಕಾರದ ವಿರುದ್ಧ ನಾವು ಹೋರಾಟ ಕೈಗೊಂಡಿದ್ದೇವೆ ಎಂದು ಐವನ್ ಡಿಸೋಜ ಹೇಳಿದರು.