ಮಂಗಳೂರು: ನಗರದ ಸುಚಿತ್ರಾ ಚಿತ್ರ ಮಂದಿರಕ್ಕೆ ನಟ ರಕ್ಷಿತ್ ಶೆಟ್ಟಿ ಆಗಮಿಸಿ ಕೆಲ ಹೊತ್ತು ಅವನೇ ಶ್ರೀಮನ್ನಾರಾಯಣ ಚಿತ್ರ ವೀಕ್ಷಣೆ ಮಾಡಿದರು.
ಅವನೇ ಶ್ರೀಮನ್ನಾರಾಯಣ ಚಿತ್ರದ ಪ್ರಮೋಷನ್ಗಾಗಿ ಚಿತ್ರ ತಂಡದೊಂದಿಗೆ ಆಗಮಿಸಿದ ರಕ್ಷಿತ್ ಶೆಟ್ಟಿ ಕಂಡೊಡನೆ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.
ಸಿನಿಮಾ ವೀಕ್ಷಣೆ ಬಳಿಕ, ತುಳುವಿವಲ್ಲೇ ಸಂಭಾಷಣೆ ನಡೆಸಿದ ರಕ್ಷಿತ್ ಶೆಟ್ಟಿ, ಸೋಮವಾರ ಆದ್ದರಿಂದ ಥಿಯೇಟರ್ನಲ್ಲಿ ಜನ ಕಡಿಮೆ ಇದ್ದಾರೆ. ಆದರೂ ಕರಾವಳಿ ಭಾಗದಿಂದ ಸಿನಿಮಾಕ್ಕೆ ಒಳ್ಳೆಯ ಪ್ರೋತ್ಸಾಹ ದೊರಕಿದೆ. ಕರಾವಳಿಗರಿಗೆ ನಮ್ಮ ಇಡೀ ಸಿನಿಮಾ ತಂಡದ ಪರವಾಗಿ ಧನ್ಯವಾದ ಸಮರ್ಪಿಸುತ್ತಿದ್ದೇನೆ. ನಮ್ಮ ಎಲ್ಲಾ ಸಿನಿಮಾಗಳಿಗೂ ನಿಮ್ಮ ಪ್ರೋತ್ಸಾಹ ಇದೇ ರೀತಿಯಲ್ಲಿ ಇರಲಿ. ನಾವು ಪ್ರತೀ ಸಲವೂ ಮೊದಲಿನ ಸಿನಿಮಾಕ್ಕಿಂತ ಭಿನ್ನತೆಯನ್ನು ಕೊಡಲು ಪ್ರಯತ್ನಿಸುತ್ತಿದ್ದೇವೆ. ಪ್ರೇಕ್ಷಕರ ಪ್ರೋತ್ಸಾಹ ಇದೇ ರೀತಿ ಇದ್ದಲ್ಲಿ ಇನ್ನೂ ಉತ್ತಮ ಸಿನಿಮಾ ನೀಡಲು ನಮಗೆ ಇನ್ನಷ್ಟು ಹುರುಪು ಬರುತ್ತದೆ ಎಂದು ಹೇಳಿದರು. ಈ ಸಂದರ್ಭ ಸಿನಿಮಾದ ನಾಯಕಿ ಸಾನ್ವಿ ಶ್ರೀವಾತ್ಸವ್, ನಿರ್ದೇಶಕ ಸಚಿನ್, ಖಳನಾಯಕ ಬಾಲಾಜಿ ಮನೋಹರ್ ಜೊತೆಗಿದ್ದರು.