ಬಂಟ್ವಾಳ: ಇಲ್ಲಿನ ಪುರಸಭೆಯ ಪರಿಸರ ಇಂಜಿನಿಯರ್ ಬುಧವಾರ ಅಸುರಕ್ಷಿತವಾಗಿ ಪೌರಕಾರ್ಮಿಕರ ಜ್ವರ ತಪಾಸಣೆ ಮಾಡಿರುವುದು ಪೌರ ಕಾರ್ಮಿಕರಲ್ಲಿ ಆತಂಕ ಉಂಟು ಮಾಡಿದೆ. ಅಲ್ಲದೆ, ಈ ಕುರಿತು ಆಕ್ಷೇಪಗಳು ವ್ಯಕ್ತವಾಗಿವೆ.
ಪರಿಸರ ಇಂಜಿನಿಯರ್ ಯಾಸ್ಮೀನ್ ಸುಲ್ತಾನ್ ಅವರು ಪೌರಕಾರ್ಮಿಕರ ಬಾಯಿಗೆ ಥರ್ಮಾಮೀಟರ್ ಇಟ್ಟು ಜ್ವರ ತಪಾಸಣೆ ನಡೆಸಿದ್ದಾರೆ. ಈ ಸಂದರ್ಭ ಸ್ಯಾನಿಟೈಸರ್ ಬಳಸದೆ ಕೇವಲ ಕ್ರೇಟ್ ನಲ್ಲಿ ಇಟ್ಟ ಬಿಸಿ ನೀರಿನಲ್ಲಿ ಅದನ್ನು ಅದ್ದಿ ಸುರಕ್ಷತಾ ಕ್ರಮವನ್ನು ಬಳಸದೇ ಇರುವುದು ಪೌರಕಾರ್ಮಿಕರ ಆತಂಕಕ್ಕೆ ಕಾರಣವಾಗಿದೆ.
ಪುರಸಭೆಯ ಕೆಲ ಕಾರ್ಮಿಕರು ಸೀಲ್ಡೌನ್ ಆದ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದು, ಇವರೆಲ್ಲರ ಬಾಯಿಗೂ ಸ್ಕ್ರೀನಿಂಗ್ ಟೂಲನ್ನು ಇಟ್ಟು ಜ್ವರ ತಪಾಸಣೆ ನಡೆಸಿರುವುದು ಪೌರಕಾರ್ಮಿಕರಲ್ಲಿ ಭೀತಿ ಮೂಡಿಸಿದೆ. ವೈದ್ಯರು ಮಾಡಬೇಕಾದ ಕೆಲಸವನ್ನು ಪರಿಸರ ಇಂಜಿನಿಯರ್ ಸುರಕ್ಷತಾ ಕ್ರಮಗಳನ್ನು ಬಳಸದೆ ಮಾಡಿರುವುದು ಪೌರಕಾರ್ಮಿಕರ ಆತಂಕವನ್ನು ಹೆಚ್ಚಿಸಿದೆ.
ಈ ಬಗ್ಗೆ ಮಾಹಿತಿ ಪಡೆದ ಮುಖ್ಯಾಧಿಕಾರಿಯವರು ಪರಿಸರ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ನೋಟಿಸನ್ನು ಜಾರಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಎಲ್ಲಾ ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಲಾಗಿದೆ. ಆದರೆ ತರಾತುರಿಯಲ್ಲಿ ಪೌರಕಾರ್ಮಿಕರ ಆರೋಗ್ಯ ತಪಾಸಣೆ ಮಾಡುವ ಭರದಲ್ಲಿ ಈ ರೀತಿ ಟೆಸ್ಟ್ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.