ಮಂಗಳೂರು: ಸಲಿಂಗ ಕಾಮದ ವಿಚಾರದಲ್ಲಿ ಹಣ ನೀಡದ ಹಿನ್ನೆಲೆಯಲ್ಲಿ ಜಯಾನಂದ ಆಚಾರ್ಯ (65) ಎಂಬವರನ್ನು ಹತ್ಯೆ ಮಾಡಿದ್ದ ಆರೋಪಿ ರಾಜೇಶ್ ಪೂಜಾರಿಗೆ (31) ಮಂಗಳೂರಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಜಯಾನಂದ ಆಚಾರ್ಯ 2022ರ ಅಕ್ಟೋಬರ್ 7 ರಂದು ಆರೋಪಿ ರಾಜೇಶ್ ಪೂಜಾರಿಯನ್ನು ಸಲಿಂಗಕಾಮಕ್ಕೆ ಬಳಸಿಕೊಂಡಿದ್ದನು. ಆ ಬಳಿಕ ಆರೋಪಿಗೆ ಹಣ ನೀಡಿರಲಿಲ್ಲ. ಇದರಿಂದ ಕೋಪಗೊಂಡ ಆತ ಜಯಾನಂದ ಆಚಾರ್ಯರ ಕತ್ತನ್ನು ಪ್ಲಾಸ್ಟಿಕ್ ದಾರದಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದನು. ಈ ಹತ್ಯೆಯ ಬಳಿಕ ಆರೋಪಿ ಪರಾರಿಯಾಗಿದ್ದನು. ಮರಣದಂಡನೆ ಶಿಕ್ಷೆ ವಿಧಿಸುವ ಪ್ರಕರಣ ಇದಾಗಿದ್ದು, ಆರೋಪಿಗೆ ಜಾಮೀನು ನೀಡಬಾರದೆಂದು ಪ್ರಾಸಿಕ್ಯೂಷನ್ ಪರ ಸರ್ಕಾರಿ ವಕೀಲರು ವಾದ ಮಂಡಿಸಿದ್ದರು. ಆರೋಪಿ ಅಪರಾಧಿ ಹಿನ್ನೆಲೆ ಹೊಂದಿದ್ದು, ಜಾಮೀನಿನ ಮೇಲೆ ಬಿಡುಗಡೆ ಮಾಡಿದರೆ ಇಂಥದ್ದೇ ಅಪರಾಧಗಳನ್ನು ನಡೆಸುವ ಸಾಧ್ಯತೆ ಇದೆ ಎಂದು ವಾದ ಮಾಡಿದ್ದರು.
ಆದರೆ, ಆರೋಪಿ ಪರ ವಕೀಲರು ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ಲಭ್ಯ ಸಾಕ್ಷ್ಯಾಧಾರಗಳನ್ನು ಪೊಲೀಸರು ಈಗಾಗಲೇ ಸಂಗ್ರಹಿಸಿದ್ದಾರೆ. ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನೂ ಸಲ್ಲಿಸಿದ್ದಾರೆ. ಆರೋಪಿಯು ಸ್ಥಳೀಯನಾಗಿದ್ದು, ನ್ಯಾಯವಿಚಾರಣೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ವಾದ ಮಂಡಿಸಿದ್ದರು. ಇದನ್ನು ಪರಿಗಣಿಸಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಎಂ ಜೋಷಿಯವರು ಆರೋಪಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದ್ದಾರೆ. ಆರೋಪಿಯ ಪರವಾಗಿ ನ್ಯಾಯವಾದಿ ಹರ್ಷಕುಮಾರ್ ವಾದಿಸಿದ್ದರು.
ಘಟನೆಯ ಹಿನ್ನೆಲೆ: ಕೊಲೆಯಾದ ಜಯಾನಂದ ಆಚಾರ್ಯ ಕೂಲಿ ಕೆಲಸ ಮಾಡುತ್ತಿದ್ದರು, ದಸರಾ ಸಂದರ್ಭದಲ್ಲಿ ಹೆಣ್ಣು ವೇಷ ಹಾಕುತ್ತಿದ್ದರು. ವಿಪರೀತ ಮದ್ಯದ ಚಟದ ದಾಸರಾಗಿದ್ದರು. ಬಂಧಿತ ಆರೋಪಿ ರಾಜೇಶ್ ಪೂಜಾರಿ ನಗರದ ಲಾಲ್ಬಾಗ್ನಲ್ಲಿರುವ ಬಾರ್ನಲ್ಲಿ ಕೆಲಸಗಾರನಾಗಿದ್ದ. ಈತನನ್ನು ವೃದ್ಧ ಜಯಾನಂದ ಆಚಾರ್ಯ ಸಲಿಂಗಕಾಮದ ಉದ್ದೇಶಕ್ಕೆಂದು ಅಕ್ಟೋಬರ್ 7, 8 ರಂದು ಬಳಸಿಕೊಂಡಿದ್ದರು. ಬಳಿಕ ಹಣ ನೀಡುವುದಾಗಿ ಹೇಳಿದ್ದರಂತೆ.
ಆದರೆ, ಸಲಿಂಗಕಾಮದ ಬಳಿಕ 300 ರೂ. ಕೊಡಲು ಜಯಾನಂದ ಆಚಾರ್ಯ ಸತಾಯಿಸಿದ್ದರಂತೆ. ಇದರಿಂದ ಕೋಪಗೊಂಡ ಯುವಕ ರಾಜೇಶ್ ಪೂಜಾರಿ ಪ್ಲಾಸ್ಟಿಕ್ ದಾರದಿಂದ ಜಯಾನಂದ ಆಚಾರ್ಯ ಅವರ ಕತ್ತು ಬಿಗಿದು ಕೊಲೆ ಮಾಡಿದ್ದ. ಈ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕಾವೂರು ಠಾಣಾ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು.
ಸಲಿಂಗ ಸಂಗಾತಿಯ ಕೊಲೆ: ತೆಲಂಗಾಣದ ಮಂಚೇರಿಯಲ್ ಜಿಲ್ಲೆಯ ಮಂದಮರ್ರಿ ಪ್ರದೇಶದಲ್ಲಿ ಯುವತಿಯೊಬ್ಬಳು ತನ್ನ ಸಲಿಂಗ ಜೋಡಿಯೊಂದಿಗೆ ಸಂಬಂಧ ಹೊಂದಿದ್ದು, ನಂತರ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾರ್ಚ್ 17 ರಂದು ತಿಳಿಸಿದ್ದರು. ಮಂಚೇರಿಯಲ್ ಜಿಲ್ಲೆಯ ರಾಮಕೃಷ್ಣಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಬಿಹಾರದ ಗಲಭೆಕೋರರ ಗಲ್ಲಿಗೇರಿಸುವ ಶಾ, ಗುಜರಾತ್ನ ಅತ್ಯಾಚಾರಿಗಳಿಗೆ ಲಡ್ಡು ತಿನ್ನಿಸುತ್ತಿದ್ದಾರೆ: ಸಂಸದೆ ಮಹುವಾ ವಾಗ್ದಾಳಿ