ಕಡಬ: ಟೆಂಪೋ ಹಾಗೂ ಸ್ಕೂಟಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ದೇವಸ್ಥಾನದ ಬಳಿ ಭಾನುವಾರ ಸಂಭವಿಸಿದೆ.

ಮೃತ ಸವಾರನನ್ನು ರಾಜಸ್ಥಾನ ಮೂಲದ ಮೇಘರಾಜ್ ಎಂದು ಗುರುತಿಸಲಾಗಿದೆ. ಬೊಳ್ಳೂರು ದೇವಸ್ಥಾನದ ಕಡೆಯಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದ ಟೆಂಪೋ ಹಾಗೂ ದ್ವಿಚಕ್ರ ವಾಹನದ ನಡುವೆ ಬೊಳ್ಳೂರು ದೇವಸ್ಥಾನದ ಮುಂದಿನ ತಿರುವಿನಲ್ಲಿ ಅಪಘಾತ ಸಂಭವಿಸಿದೆ. ಟೈಲ್ಸ್ ಹಾಕುವ ಕೆಲಸ ಮಾಡುತ್ತಿದ್ದ ಮೇಘರಾಜ್ ಕಡಬಕ್ಕೆ ತೆರಳಿ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿದ್ದಾರೆ.
ಹಾಗೆಯೇ ತಾಲೂಕಿನಲ್ಲಿ ನಡೆದ ಇನ್ನೊಂದು ಅಪಘಾತ ಪ್ರಕರಣ ನಡೆದಿದೆ. ಧರ್ಮಸ್ಥಳ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಚಾಕೋಟೆಕೆರೆ ಎಂಬಲ್ಲಿ ಮೀನಾಡಿಯಿಂದ ಮರ್ಧಾಳ ಕಡೆಗೆ ತೆರಳುತ್ತಿದ್ದ ಬೈಕಿಗೆ ಹಿಂದಿನಿಂದ ಬಂದ ಪ್ಯಾಸೆಂಜರ್ ಮಿನಿಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಢಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿತ್ತು.
ಪರಿಣಾಮ ಬೈಕಿನಲ್ಲಿದ್ದ ಮಹಿಳೆಯೋರ್ವರು ಗಂಭೀರ ಗಾಯಗೊಂಡಿದ್ದಾರೆ. ಕುಟ್ರುಪ್ಪಾಡಿ ಪಂಚಾಯತ್ ಸದಸ್ಯೆ ಕುಸುಮಾ ಗಾಯಗೊಂಡವರಾಗಿದ್ದು, ಅವರಿಗೆ ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ 108 ಆಂಬುಲೆನ್ಸ್ ಮೂಲಕ ಮಂಗಳೂರಿಗೆ ಕರೆದೊಯ್ಯಲಾಗಿದೆ. ಪರಾರಿಯಾಗಿದ್ದ ಮಿನಿಬಸ್ನ್ನು ಮರ್ಧಾಳದಲ್ಲಿ ತಡೆಹಿಡಿದ್ದು, ಕಡಬ ಪೊಲೀಸರಿಗೆ ಒಪ್ಪಿಸಲಾಗಿದ್ದು, ಪೋಲೀಸರು ಮಾಹಿತಿ ಪಡೆಯುತ್ತಿದ್ದಾರೆ.