ಮಂಗಳೂರು: ಕೋವಿಡ್ ಸೋಂಕಿನ ಭೀತಿಯ ಮಧ್ಯೆ ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯ ಟೆಂಡರ್ ಹಾಗೂ ಕಾಮಗಾರಿಗಳಲ್ಲಿ ಅಕ್ರಮ ನಡೆಯುತ್ತಿದೆ. ಈ ಕುರಿತು ನನ್ನಲ್ಲಿ ದಾಖಲೆಗಳಿವೆ ಎಂದು ಮ.ನ.ಪಾ ವಿಪಕ್ಷ ನಾಯಕ ಅಬ್ದುಲ್ ರವೂಫ್ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ವೆನ್‌ಲಾಕ್‌ನಲ್ಲಿ ಸೂಪರ್ ಸ್ಪೆಷಾಲಿಟಿ 37 ಹಾಸಿಗೆಗಳ ಕಾಮಗಾರಿಗೆ ಅನಂತ ಕೃಷ್ಣ ಶೆಟ್ಟಿ ಎಂಬವರಿಗೆ ಟೆಂಡರ್ ಆಗಿತ್ತು. ಸ್ಮಾರ್ಟ್ ಸಿಟಿ ಯೋಜನೆಯಡಿ ಕಾಮಗಾರಿ ಆದೇಶ ನೀಡಿದ್ದು, ಗುತ್ತಿಗೆದಾರರು ಬ್ಯಾಂಕ್ ಗ್ಯಾರಂಟಿ ಹಾಗೂ ಭದ್ರತಾ ಠೇವಣಿಯನ್ನೂ ಪಾವತಿಸಿದ್ದರು. ಅಲ್ಲದೆ ಅವರು 2020ರ ಮಾರ್ಚ್ 13ರಂದು ತಾನು ಕಾಮಗಾರಿ ಆರಂಭಿಸುವುದಾಗಿ ಆದೇಶವನ್ನೂ ಸ್ಮಾರ್ಟ್‌ಸಿಟಿಯಿಂದ ಕೋರಿದ್ದರು. ಆದರೆ ಏಕಾಏಕಿಯಾಗಿ ಮೌಖಿಕವಾಗಿ ಅವರಿಗೆ ನೀಡಲಾಗಿದ್ದ ಆದೇಶ ರದ್ದುಪಡಿಸಿ 2,35,61,251 ರೂ.ಗಳ ಕಾಮಗಾರಿಯನ್ನು ಬಿಜೆಪಿಯ ಜನಪ್ರತಿನಿಧಿಗಳ ಆಪ್ತರಿಂದ ಮಾಡಿಸಲಾಗಿದೆ. ಕಾಮಗಾರಿಗೆ ಸಂಬಂಧಿಸಿ ಅದಾಗಲೇ ಬ್ಯಾಂಕ್ ಮೂಲಕ ಗ್ಯಾರಂಟಿ ಹಾಗೂ ಸೆಕ್ಯೂರಿಟಿ ಹಣ ಪಾವತಿಸಿದ್ದ ಗುತ್ತಿಗೆದಾರರು ಸ್ಮಾರ್ಟ್ ಸಿಟಿಗೆ ಲೀಗಲ್ ನೋಟಿಸ್ ಜಾರಿಗೊಳಿಸಿದ್ದಾರೆ. ಇದು ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಯಡಿ ಆಗುತ್ತಿರುವ ಅಕ್ರಮಗಳಿಗೆ ಜ್ವಲಂತ ಉದಾಹರಣೆ ಎಂದು ವಿಪಕ್ಷ ನಾಯಕ ಅಬ್ದುಲ್ ರವೂಫ್ ಆರೋಪಿಸಿದರು.
ಮೀನುಗಾರಿಕೆ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ನೀಡಿ ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ ಕಾಮಗಾರಿಗಳು ಆ ಪ್ರಕಾರ ನಡೆಯುತ್ತಿಲ್ಲ. ಈ ಯೋಜನೆಗಾಗಿ ರೂಪಿಸಲಾದ ಡಿಪಿಆರ್‌ಗೆ ವ್ಯತಿರಿಕ್ತವಾಗಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ. ಆರ್‌ಟಿಒನಿಂದ ಮಿನಿ ವಿಧಾನಸೌಧದವರೆಗಿನ ಸ್ಮಾರ್ಟ್ ರಸ್ತೆಗೆ 7.5 ಕೋಟಿ ರೂ.ಗೆ ಟೆಂಡರ್ ಕರೆಯಲಾಗಿತ್ತು. ಆದರೆ ಇದೀಗ ಅದನ್ನು ಏಕಾಏಕಿ ರದ್ದುಪಡಿಸಲಾಗಿದೆ. ಏನಾದರೂ ಲೋಪವಿದ್ದಲ್ಲಿ ರದ್ದುಪಡಿಸಲಾದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಬದಲು ಅದೇ ಗುತ್ತಿಗೆದಾರನಿಂದ ಸೆಂಟ್ರಲ್ ಮಾರುಕಟ್ಟೆಯ ವ್ಯಾಪಾರಸ್ಥರಿಗೆ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ 6.5 ಕೋಟಿ ರೂ. ದರದ ಟೆಂಡರ್ ನೀಡಲಾಗಿದೆ. ಸೆಂಟ್ರಲ್ ಮಾರುಕಟ್ಟೆ ಬಂದ್ ಆಗಿರುವುದರಿಂದ ವ್ಯಾಪಾರಸ್ಥರು ಕಳೆದ ಸುಮಾರು ನಾಲ್ಕು ತಿಂಗಳಿನಿಂದ ಬೀದಿ ಪಾಲಾಗಿದ್ದಾರೆ. ಈ ನಡುವೆ ನೆಹರೂ ಮೈದಾನದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಲಾಗಿದ್ದು, ಇದರ ವಿರುದ್ಧ ಫುಟ್‌ಬಾಲ್ ಅಸೋಸಿಯೇಶನ್‌ನವರು ನ್ಯಾಯಾಲಯದ ಮೆಟ್ಟಿಲೇರಿದ ಕಾರಣ ಕಾಮಗಾರಿಗೆ ತಡೆ ನೀಡಲಾಗಿದೆ. ಈ ರೀತಿ ಜನರ ತೆರಿಗೆ ಹಣವನ್ನು ಈ ರೀತಿ ಪೋಲು ಮಾಡುವ ಕಾರ್ಯ ಪ್ರಸಕ್ತ ಮನಪಾ ಆಡಳಿತ ಹಾಗೂ ಶಾಸಕರು ಹಾಗೂ ಸಂಸದರಿಂದ ಆಗುತ್ತಿದೆ ಎಂದು ಅವರು ಆರೋಪಿಸಿದರು.
ಈ ಸಂದರ್ಭ ಮನಪಾ ಸದಸ್ಯರಾದ ಶಶಿಧರ ಹೆಗ್ಡೆ, ಲ್ಯಾನ್ಸಿ ಲಾಟ್ ಪಿಂಟೋ, ಪ್ರವೀಣ್ ಚಂದ್ರ ಆಳ್ವ, ವಿನಯ ರಾಜ್, ಕೇಶವ ಮರೋಳಿ, ಜೆಸಿಂತಾ ಅಲ್ಪ್ರೆಡ್, ನವೀನ್ ಡಿಸೋಜಾ, ಭಾಸ್ಕರ ಕೆ., ಝೀನತ್ ಬಂದರ್, ಅನಿಲ್ ಕುಮಾರ್, ಸಂಶುದ್ದೀನ್ ಕುದ್ರೋಳಿ, ಅಶ್ರಫ್ ಬಜಾಲ್ ಉಪಸ್ಥಿತರಿದ್ದರು.