ಮಂಗಳೂರು: ವ್ಯಕ್ತಿಯೊಬ್ಬ ಬಸ್ನಲ್ಲಿ ತೆರಳುತ್ತಿದ್ದ ವೇಳೆ ಮಹಿಳೆಯ ಜೊತೆಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಿ ತಂಡವೊಂದು ಆತನನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿರುವ ಘಟನೆ ಮುನ್ನೆಲೆಗೆ ಬಂದಿದೆ. ಈ ಘಟನೆಯ ದೃಶ್ಯಾವಳಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ಈ ಘಟನೆ ನಡೆದಿದೆ. ಬಸ್ನಲ್ಲಿ ಹೋಗುತ್ತಿದ್ದಾಗ ವ್ಯಕ್ತಿಯೊಬ್ಬರಿಗೆ ಬಸ್ ಕಂಡೆಕ್ಟರ್ ಸೇರಿ ಯುವಕರು ಸೇರಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ಮೂಲರಪಟ್ನ ನಿವಾಸಿ ಇಸಾಕ್ (45) ಎಂದು ಗುರುತಿಸಲಾಗಿದೆ.
ಮೇಸ್ತ್ರಿ ಕೆಲಸ ಮಾಡುತ್ತಿರುವ ಈತ ಬುಧವಾರ ಬೆಳಗ್ಗೆ ಬಿ.ಸಿ.ರೋಡ್ನಿಂದ ಮೂಡಬಿದ್ರೆಗೆ ಖಾಸಗಿ ಬಸ್ನಲ್ಲಿ ಹೋಗುತ್ತಿದ್ದರು. ವಿಪರೀತ ಪ್ರಯಾಣಿಕ ದಟ್ಟಣೆ ಉಂಟಾದ ಸಂದರ್ಭದಲ್ಲಿ ಇಸಾಕ್ ಅವರು ಕುಳಿತಿದ್ದ ಸೀಟಿನ ಬಳಿ ನಿಂತಿದ್ದ ಮಹಿಳೆಯೊಬ್ಬರು ಬ್ಯಾಗ್ ಹಿಡಿದುಕೊಳ್ಳುವಂತೆ ತಿಳಿಸಿದ್ದಾರೆ. ಬಳಿಕ ಮಹಿಳೆ ತಾನು ಇಳಿಯುವ ಜಾಗದಲ್ಲಿ ಇಸಾಕ್ರಿಂದ ಬ್ಯಾಗ್ ಪಡೆದು ತೆರಳಿದ್ದಾರೆ.
ಇದಾದ ಬಳಿಕ ಬಸ್ ಕಂಡೆಕ್ಟರ್ ಇಸಾಕ್ ಬಳಿ ಬಂದು ನೀವು ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ್ದೀರಿ ಎಂದು ಆರೋಪಿಸಿ ಬಸ್ನಿಂದ ಕೆಳಗಿಳಿಸಿ ಹಲ್ಲೆ ನಡೆಸಿದ್ದಾನೆ ಎನ್ನಲಾಗ್ತಿದೆ. ಹಲ್ಲೆ ವೇಳೆ ಬಸ್ ಕಂಡಕ್ಟರ್ ಕೆಲವರಿಗೆ ಮೊಬೈಲ್ನಲ್ಲಿ ಕರೆ ಮಾಡಿ ಕೆಲವು ಯುವಕರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ಕಂಡಕ್ಟರ್ ಯುವಕರ ಗುಂಪಿಗೆ ಇಸಾಕ್ರನ್ನು ಹಸ್ತಾಂತರಿಸಿದ್ದಾರೆ.
ಆ ಯುವಕರ ಗುಂಪು ಇಸಾಕ್ರನ್ನು ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ರಾಯಿ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಮರಕ್ಕೆ ಕಟ್ಟಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ ಎನ್ನಲಾಗಿದೆ. ಇಸಾಕ್ ತೀವ್ರ ಅಸ್ವಸ್ಥರಾದ ಮೇಲೆ ಯುವಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಇಸಾಕ್ರನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿ ಠಾಣೆಗೆ ಕರೆದೊಯ್ದಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಹೇಳುವುದೇನು?: ಈ ಬಗ್ಗೆ ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಾಣೆ, ಈ ಹಲ್ಲೆ ಬಗ್ಗೆ ಗಮನಕ್ಕೆ ಬಂದಿದೆ. ವಿಡಿಯೋ ಪರಿಶೀಲಿಸಲಾಗಿದೆ. ಆಸ್ಪತ್ರೆಯಿಂದ ವರದಿ ಬಂದ ಬಳಿಕ ಪ್ರಕರಣ ದಾಖಲಿಸಲಾಗುವುದು ಎಂದು ತಿಳಿಸಿದ್ದಾರೆ.
ಓದಿ: ಬೀದಿಯಲ್ಲೇ ಅತ್ತೆ ಮೇಲೆ ಸೊಸೆಯಿಂದ ಹಲ್ಲೆ.. ಗಂಡನ ಏಟಿಗೂ ಬಗ್ಗದ ಪತ್ನಿ