ಮಂಗಳೂರು: ಹೊಸದಾಗಿ ಏರ್ ಕಂಡೀಷನರ್ ಮಷಿನ್ ಕನೆಕ್ಟ್ ಮಾಡುತ್ತಿದ್ದ ವೇಳೆ ಬಹುಮಹಡಿ ಕಟ್ಟಡದದಿಂದ ಬಿದ್ದು ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಗರದ ನಂತೂರಿನಲ್ಲಿ ನಡೆದಿದೆ. ಬಂಟ್ವಾಳ ತಾಲೂಕಿನ ಮಣಿಹಳ್ಳ ನಿವಾಸಿ ವಿನಯ್ ತಾವೋ(23) ಮೃತಪಟ್ಟ ಯುವಕ. ಈತ 9ನೇ ಮಹಡಿಯಿಂದ ಆಯತಪ್ಪಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವಿನಯ್ ತಾವ್ರೋ ನಂತೂರಿನ ರೆಫ್ರಿಜರೇಟರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇವರು ಇಂದು ನಂತೂರಿನಲ್ಲಿರುವ ಮೌಂಟ್ ಟಿಯಾರಾ ಅಪಾರ್ಟೆಂಟ್ನಲ್ಲಿ ಗ್ರಾಹಕರೊಬ್ಬರಿಗೆ ಹೊಸದಾಗಿ ಎಸಿ ಮಷಿನ್ ಕನೆಕ್ಟ್ ಮಾಡಲು ತೆರಳಿದ್ದರು. ಈ ಅಪಾರ್ಟ್ಮೆಂಟ್ನ 9ನೇ ಮಹಡಿಯ ಮನೆಯ ಆವರಣ ಗೋಡೆಯ ಹೊರಭಾಗದಲ್ಲಿ ವಿನಯ್ ತಾವ್ರೋ ಹಾಗೂ ಮತ್ತೋರ್ವ ಯುವಕ ಎಸಿ ಮಷಿನ್ ಫಿಟ್ ಮಾಡುತ್ತಿದ್ದರು. ಈ ವೇಳೆ ವಿನಯ್ ಏಕಾಏಕಿ ಆಯತಪ್ಪಿ ಮಹಡಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಕದ್ರಿ ಪೊಲೀಸರು ಭೇಟಿ ನೀಡಿದ್ದು ವಿನಯ್ ಮೃತದೇಹವನ್ನು ಎ.ಜೆ. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ವಿನಯ್ ಇತ್ತೀಚೆಗಷ್ಟೇ ಎಸಿ ಕಂಪನಿಗೆ ಕೆಲಸಕ್ಕೆಂದು ಸೇರಿದ್ದರು ಎಂದು ತಿಳಿದುಬಂದಿದೆ.
ಓದಿ: ಕಾಶ್ಮೀರಿ ಪಂಡಿತ್ ಹತ್ಯೆ ಪ್ರಕರಣ: ಪುಲ್ವಾಮಾ ಗ್ರಾಮದಲ್ಲಿ ಎಸ್‌ಐಎ ದಾಳಿ