ಪುತ್ತೂರು(ದ.ಕ) : ರಾಜ್ಯದೆಲ್ಲೆಡೆ ಇದೀಗ ಜನತಾ ಕರ್ಫ್ಯೂ ಜಾರಿಯಲ್ಲಿದ್ದು ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ವ್ಯವಸ್ಥೆಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ.
ಇದರಿಂದಾಗಿ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಉದ್ಯೋಗದ ನಿಮಿತ್ತ ಬಂದವರು ಅಲ್ಲಲ್ಲೇ ಉಳಿಯುವಂತಾಗಿದೆ. ಈ ನಡುವೆ ಇಲ್ಲೊಂದು ತಂಡ ಕಾನೂನಿಗೆ ಗೌರವ ನೀಡಿ ಇದ್ದಲ್ಲೇ ಬೀಡು ಬಿಟ್ಟಿದೆ.ಊರಿಂದೂರಿಗೆ ಸಂಚರಿಸುವುದರಿಂದ ರೋಗದ ವಾಹಕರಾಗುವ ಸಾಧ್ಯತೆಯೂ ಹೆಚ್ಚಾಗಿದೆ. ಇದನ್ನು ಮನಗಂಡ ತಂಡವೊಂದು ಕಳೆದ ಸರಿ ಸುಮಾರು ಒಂದು ತಿಂಗಳಿನಿಂದ ಉದ್ಯೋಗ ನಿಮಿತ್ತ ಬಂದಲ್ಲೇ ನೆಲೆ ನಿಂತಿದೆ.
ಜಿಲ್ಲೆಯ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಮನೋರಂಜನೆ ನೀಡುವ ಜೈಂಟ್ ವ್ಹೀಲ್, ಮಿನಿ ರೈಲು ಹೀಗೆ ವಿವಿಧ ಪರಿಕರಗಳ ಜೊತೆ ಬಂದಿರುವ ಈ ತಂಡಕ್ಕೆ ಜಾತ್ರೆ ಮುಗಿದ ಮರುದಿನವೇ ಲಾಕ್ಡೌನ್ನ ಶಾಕ್ ತಟ್ಟಿದೆ.
ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಸುಮಾರು 50 ಜನರಿರುವ ಈ ತಂಡ ಕಳೆದ 25 ದಿನಗಳಿಂದ ದೇವಸ್ಥಾನದ ಗದ್ದೆಯಲ್ಲೇ ಜೀವನ ಸಾಗಿಸುತ್ತಿದೆ. ಊರಿನ ಕಡೆಗೆ ಹೋಗಲು ವ್ಯವಸ್ಥೆಯಿಲ್ಲದ ಕಾರಣ, ಲಾಕ್ಡೌನ್ ಮುಗಿಯುವ ತನಕ ಇಲ್ಲೇ ಇರಲು ಈ ತಂಡ ತೀರ್ಮಾನಿಸಿದೆ.
ಈ ತಂಡಕ್ಕೆ ಊಟೋಪಚಾರದ ವ್ಯವಸ್ಥೆಯನ್ನು ದೇವಸ್ಥಾನದ ವತಿಯಿಂದ ಹಾಗೂ ದಾನಿಗಳ ಸಹಾಯದಿಂದ ನೀಡಲಾಗುತ್ತಿದೆ. ವ್ಯವಸ್ಥೆ ಹಾಗೂ ಕಾನೂನಿಗೆ ಗೌರವ ಕೊಟ್ಟು ತಾವು ಇದ್ದಲ್ಲೇ ಜೀವನ ಸಾಗಿಸುತ್ತಿರುವ ಈ ತಂಡದಲ್ಲಿ ಮೈಸೂರು, ಹುಣಸೂರು ಹಾಗೂ ಮಹಾರಾಷ್ಟ್ರದ ಮೂಲದವರೂ ಇದ್ದಾರೆ.
ಒಂಬತ್ತು ತಿಂಗಳು ತುಂಬು ಗರ್ಭಿಣಿ ಸೇರಿದಂತೆ, ಮಕ್ಕಳು ಹಾಗೂ ವಯೋವೃದ್ಧರನ್ನು ಹೊಂದಿರುವ ಈ ತಂಡ ಊರಿಗೆ ತೆರಳಿ ವ್ಯವಸ್ಥೆಗೆ ತೊಂದರೆ ನೀಡಲು ಸಿದ್ದರಿಲ್ಲದೆ, ಇರುವುದರಲ್ಲೇ ಸಂತೋಷದಿಂದ ಇರಲು ತೀರ್ಮಾನಿಸಿದೆ.ಸುಮಾರು 7 ಲಾರಿ ಸಾಮಗ್ರಿಗಳನ್ನು ತಮ್ಮೊಂದಿಗೆ ಸಾಗಿಸಬೇಕಾಗಿದ್ದು, 2 ಲಕ್ಷಕ್ಕೂ ಮಿಕ್ಕಿದ ಹಣ ಈ ವ್ಯವಸ್ಥೆಗಾಗಿ ವಿನಿಯೋಗಿಸಬೇಕಾಗಿದೆ. ಕೊರೊನಾದಿಂದಾಗಿ ಹೆಚ್ಚಿನ ಆದಾಯವೂ ಇಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಈ ತಂಡ ಮೂಲ ಸೌಕರ್ಯಗಳನ್ನು ಕಲ್ಪಿಸುವ ವ್ಯವಸ್ಥೆ ಆಗಬೇಕಿದೆ.