ಸುಳ್ಯ(ದಕ್ಷಿಣಕನ್ನಡ): ತುಳುನಾಡಿನ ಪ್ರಸಿದ್ಧ ಕಾರ್ಣಿಕ ದೈವ ಕೊರಗಜ್ಜನಿಗೆ ಪ್ರಾರ್ಥನೆ ಮಾಡಿ ಇರಿಸಿದ್ದ ವೀಳ್ಯದೆಲೆಯಲ್ಲಿ ಬೇರು ಮೂಡಿರುವ ಅಚ್ಚರಿಯ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಮೊಗ್ರ ಎಂಬಲ್ಲಿ ನಡೆದಿದೆ. ಸುಳ್ಯದ ಮೊಗ್ರದ ಮಾತ್ರಮಜಲು ಶೀನಪ್ಪ ಎಂಬವರ ಮನೆಯ ವಠಾರದಲ್ಲಿ ಕೊರಗಜ್ಜ ದೈವದ ಕಟ್ಟೆಯೊಂದು ಇದೆ. ಇಲ್ಲಿ ಪ್ರತೀ ತಿಂಗಳು ಸಂಕ್ರಮಣದ ದಿನದಂದು ದೈವ ಆರಾಧನೆಯಾಗುತ್ತದೆ.
ಕಳೆದ ತಿಂಗಳು ಮಗುವಿಗೆ ಅನಾರೋಗ್ಯ ಇದ್ದಾಗ ಸ್ಥಳೀಯರು ಇಲ್ಲಿನ ಕೊರಗಜ್ಜ ದೈವಕ್ಕೆ ಹರಕೆ ಹೇಳಿದ್ದರು. ಈ ಸಂದರ್ಭ ಕೊರಗಜ್ಜನಿಗೆ ಪ್ರಿಯವಾದ ವೀಳ್ಯದೆಲೆ, ಅಡಕೆಯನ್ನು ಕಟ್ಟೆಯ ಮೇಲೆ ಇರಿಸಿ ಪ್ರಾರ್ಥನೆ ಸಲ್ಲಿಸಿದ್ದರು. ಅದಾಗಿ ಕೆಲವು ದಿನಗಳವರೆಗೂ ಈ ವೀಳ್ಯದೆಲೆ ಹಸಿರಾಗಿಯೇ ಇದ್ದು, ನಂತರ ಈ ಎಲೆಗೆ ಬೇರು ಬರಲು ಆರಂಭಿಸಿದೆ.
ತಕ್ಷಣವೇ ಶೀನಪ್ಪ ಅವರು ದೈವಜ್ಞರ ಮೂಲಕ ವಿಚಾರಿಸಿದಾಗ ಇಲ್ಲಿಗೆ ಹರಕೆ ಹೇಳಿದ ಆ ಮಗು ಆರೋಗ್ಯವಾಗಿರುವುದೂ ತಿಳಿಯಿತು. ಹೀಗಾಗಿ ಅದೇ ವೀಳ್ಯದೆಲೆಯನ್ನು ಇವರು ಈಗ ಹೂಕುಂಡವೊಂದರಲ್ಲಿ ಇರಿಸಿದ್ದಾರೆ. ಈಗಲೂ ವೀಳ್ಯದೆಲೆ ಹಸಿರಾಗಿಯೇ ಇದೆ. ವೀಳ್ಯದೆಲೆಯು ಸಾಮಾನ್ಯವಾಗಿ ಒಂದು ವಾರದಲ್ಲಿ ಬಾಡಿ ಹೋಗುತ್ತದೆ. ಕಳೆದ ತಿಂಗಳು ಈ ವೀಳ್ಯದೆಲೆಯನ್ನು ಕೊರಗಜ್ಜ ಕಟ್ಟೆಯ ಮೇಲೆ ಇರಿಸಲಾಗಿತ್ತು ಎಂದು ಶೀನಪ್ಪ ಅವರು ಹೇಳುತ್ತಾರೆ.
ಕೊರಗಜ್ಜನ ಕಟ್ಟೆಯಲ್ಲಿ ಇರಿಸಿರುವ ಈ ವೀಳ್ಯದೆಲೆಯು ಹಸಿರಾಗಿಯೇ ಇದ್ದು, ಜೊತೆಗೆ ಬೇರು ಮೂಡಿರುವುದು ಭಕ್ತರ ನಂಬಿಕೆಯನ್ನು ಇಮ್ಮಡಿಗೊಳಿಸಿದೆ.
ಇದನ್ನೂ ಓದಿ :ಮಂಗಳೂರು: ಮಳೆಗಾಲದಲ್ಲಿ ಮನೆ ಮನೆಗಳಲ್ಲಿ ಯಕ್ಷಗಾನದ ರಂಗು