ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟದ ಆರೋಪಿಗೆ ಕದ್ರಿ ದೇವಸ್ಥಾನದಲ್ಲಿ ಸ್ಪೋಟಿಸುವ ಗುರಿ ಇತ್ತು ಎಂಬ ವಿಚಾರ ಬೆಳಕಿಗೆ ಬಂದಿರುವ ಹಿನ್ನೆಲೆ ಕದ್ರಿ ದೇವಸ್ಥಾನದಿಂದ ಪೊಲೀಸ್ ಭದ್ರತೆಗಾಗಿ ಮನವಿ ಮಾಡಲಾಗಿದೆ.
ಮಂಗಳೂರು ಕದ್ರಿ ಪೊಲೀಸ್ ಠಾಣೆಗೆ ಕದ್ರಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಅವರು ದೂರೊಂದನ್ನು ನೀಡಿದ್ದು, ಇದರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಉಗ್ರನಿಗೆ ಕದ್ರಿ ದೇವಸ್ಥಾನದಲ್ಲಿ ಬಾಂಬ್ ಸ್ಫೋಟಿಸುವ ಗುರಿ ಇತ್ತು ಎಂದು ತಿಳಿದು ಬಂದಿರುವುದರಿಂದ ಮುಜರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಕ್ಕೆ ಪೊಲೀಸ್ ಭದ್ರತೆ ನೀಡುವಂತೆ ದೂರಿನಲ್ಲಿ ತಿಳಿಸಲಾಗಿದೆ. ದೂರು ನೀಡಿರುವ ಬಗ್ಗೆ ಕದ್ರಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಅವರು ಈಟಿವಿ ಭಾರತಕ್ಕೆ ದೃಢಪಡಿಸಿದ್ದಾರೆ.
ನವೆಂಬರ್ 19 ರಂದು ಮಂಗಳೂರಿನ ಗರೋಡಿ ಬಳಿ ರಿಕ್ಷಾದಲ್ಲಿ ಸಂಚರಿಸುತ್ತಿದ್ದಾಗಲೇ ಉಗ್ರ ಶಾರೀಕ್ ಕೈಯಲ್ಲಿದ್ದ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ ಉಗ್ರ ಶಾರಿಕ್ ಮತ್ತು ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಗಾಯಗೊಂಡಿದ್ದರು. ಘಟನೆ ನಡೆದು ಐದು ದಿನಗಳ ಬಳಿಕ ಉಗ್ರ ಸಂಘಟನೆಯೊಂದರ ಪೋಸ್ಟರ್ ವೈರಲ್ ಆಗಿದ್ದು, ಅದರಲ್ಲಿ ಶಾರಿಕ್ ಗೆ ಕದ್ರಿ ದೇವಸ್ಥಾನದಲ್ಲಿ ಬಾಂಬ್ ಸ್ಫೋಟಿಸುವ ಗುರಿ ಇತ್ತು ಎಂದು ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಕದ್ರಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಜಯಮ್ಮ ಅವರು ದೂರು ದಾಖಲಿಸಿದ್ದಾರೆ.
ಓದಿ: ಕುಕ್ಕರ್ ಬಾಂಬ್ ಸ್ಫೋಟ ಸ್ಥಳಕ್ಕೆ 6 ದಿನಗಳ ಬಳಿಕ ಸಚಿವ ಸುನಿಲ್ ಕುಮಾರ್ ಭೇಟಿ