ಮಂಗಳೂರು: ಹಿಂದೂ ಯುವತಿಗೆ ಮುಸ್ಲಿಂ ಕುಟುಂಬವೊಂದು ಮದುವೆ ಮಾಡಿಸಿರುವ ಘಟನೆಗೆ ಉಳ್ಳಾಲ ಸಾಕ್ಷಿಯಾಗಿದೆ. ವಿಧವೆ ತಾಯಿ ಹಾಗೂ ಮಗಳು ನಗರದ ಉಳ್ಳಾಲದ ಮಂಚಿಲದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು. ಮಗಳು ಕವನಾಳಿಗೆ ವಿವಾಹ ಸಂಬಂಧವು ಕೂಡಿ ಬಂದಿದ್ದು, ಜುಲೈ 11ರಂದು ಮದುವೆ ನಿಗದಿಯಾಗಿತ್ತು. ಆದರೆ ತೀರಾ ಬಡವರಾದ ಈ ಕುಟುಂಬ ವಿವಾಹದ ಖರ್ಚು ವೆಚ್ಚವನ್ನು ಭರಿಸಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತಿತ್ತು. ಒಂದು ಹಂತದಲ್ಲಿ ಮದುವೆ ಅಕ್ಷರಶಃ ನಿಲ್ಲುವ ಮಟ್ಟಕ್ಕೆ ತಲುಪಿತ್ತು.
ಈ ವಿಷಯವನ್ನು ಅರಿತ ಯುವತಿಯ ಸಂಬಂಧಿ ಸುರೇಶ್ ಎಂಬವರು ತಮ್ಮ ಆತ್ಮೀಯ ಗೆಳೆಯ ಎಂ.ಕೆ.ರಝಾಕ್ ಎಂಬವರೊಂದಿಗೆ ಈ ನೋವನ್ನು ಹಂಚಿಕೊಂಡಿದ್ದಾರೆ. ತಕ್ಷಣ ಈ ಮದುವೆಗೆ ಎಂ.ಕೆ.ರೈಝಾಕ್ ಅವರ ಕುಟುಂಬ ಸಹಾಯ ಮಾಡಿದೆ.
ಈ ಕುಟುಂಬ ಯುವತಿಯ ಮದುವೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಎಂ.ಕೆ ಗ್ರೂಪಿನ ಅಧ್ಯಕ್ಷ ಯು.ಎಚ್.ಅಬ್ದುರ್ರಹ್ಮಾನ್ ಹಾಗೂ ಎಂ.ಕೆ.ಹಂಝ ಅವರು ಎಂ.ಕೆ. ಗ್ರೂಪ್ ಮ್ಯಾರೇಜ್ ಫಂಢ್ನಿಂದ ಮದುವೆಗೆ ಹಣ ಸಂಗ್ರಹಿಸಿದರು.
ಎಂ.ಕೆ.ಕುಟುಂಬವು ಮದುಮಗಳಿಗೆ ಬೇಕಾದ ಬೆಳ್ಳಿಯ ಕಾಲುಂಗುರ ಮತ್ತು ಚಿನ್ನದ ಕೈ ಉಂಗುರ, ಕಿವಿಯೋಲೆ ಮತ್ತಿತರ ಬೆಳ್ಳಿ ವಸ್ತುಗಳನ್ನು ನೀಡಿ, ಮುತುವರ್ಜಿಯೊಂದಿಗೆ ಯುವತಿ ಕವನಾಳ ಮದುವೆ ಮಾಡಿಸಿದ್ದಾರೆ. ಈ ವಿಚಾರ ತಿಳಿದು ಸ್ಥಳೀಯ ಶಾಸಕ ಯು.ಟಿ.ಖಾದರ್ ಈ ಕುಟುಂಬದ ಪರಿಸ್ಥಿತಿ ಅರಿತು ದೊಡ್ಡ ಮೊತ್ತದ ಧನಸಹಾಯ ಮಾಡಿ ಮದುವೆಗೆ ನೆರವಾಗಿದ್ದಾರೆ.
ಶನಿವಾರ ಕವನಾಳ ಮೆಹಂದಿ ಕಾರ್ಯಕ್ರಮವು ಎಂ.ಕೆ. ಹಂಝ ಅವರ ಮನೆಯಲ್ಲಿ ಸಡಗರದಿಂದ ನಡೆಯಿತು. ಭಾನುವಾರ ವಧು ಕವನಾಳ ವಿವಾಹ ವರ ರಂಜಿತ್ ಜೊತೆಗೆ ತಲಪಾಡಿಯ ದೇವಿನಗರದಲ್ಲಿರುವ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕುಟುಂಬದವರ ಸಮ್ಮುಖದಲ್ಲಿ ನಡೆದಿದೆ.