ಕಡಬ(ದ.ಕ): ಸಿ.ಪಿ ಸೈಮನ್. ಕಡಬದ ಸೈಂಟ್ ಜೋಕಿಮ್ಸ್ ವುಡ್ ಇಂಡಸ್ಟ್ರೀಸ್ ಮಾಲಕ. ತಂದೆಯ ಕಾಲದಿಂದಲೂ ಪ್ರಚಾರಗಿಟ್ಟಿಸದೆ ವಿಶೇಷವಾದ ರೀತಿಯಲ್ಲಿ ಜಾತಿಭೇದವಿಲ್ಲದೆ ಇವರು ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ.
ಮರಣವೆಂಬುದು ಇಂದು ಅಲ್ಲದಿದ್ದರೆ ನಾಳೆ ಪ್ರತಿಯೊಬ್ಬರಿಗೂ ಅನಿವಾರ್ಯವಾಗಿ ಬರುವ ಸಂಗತಿ. ಈ ಮರಣ ಸಮಯದಲ್ಲಿ ಹಿಂದೂ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಅಂತ್ಯಕ್ರಿಯೆಗೆ ಕಟ್ಟಿಗೆ ಅಗತ್ಯ. ಅದೇ ತರಹ ಕ್ರೈಸ್ತರಿಗೆ ಅಂತ್ಯ ಸಂಸ್ಕಾರಕ್ಕೆ ಮರದ ಶವಪೆಟ್ಟಿಗೆ ಅಗತ್ಯವಾಗಿ ಬೇಕು. ಈ ಸಮಯದಲ್ಲಿ ಕಟ್ಟಿಗೆ ಸಂಗ್ರಹಿಸಲು ಮತ್ತು ಶವ ಪೆಟ್ಟಿಗೆಗೆ ಬೇಕಾದ ಹಲಗೆಗೆ ದುಃಖದ ನಡುವೆಯೂ ಮೃತರ ಸಂಬಂಧಿಕರು ಓಡಾಡುವುದು ಸಾಮಾನ್ಯವಾಗಿರುತ್ತದೆ. ಆದರೆ ಕಡಬ ತಾಲೂಕಿನಲ್ಲಿ ಈ ಸಮಯದಲ್ಲಿ ಸೈಂಟ್ ಜೋಕಿಮ್ಸ್ ವುಡ್ ಇಂಡಸ್ಟ್ರೀಸ್ ನೆರವಿಗೆ ಬರುತ್ತದೆ.
ಕಡಬ-ಸುಬ್ರಹ್ಮಣ್ಯ ರಸ್ತೆಯ ಹಳೆಸ್ಟೇಷನ್ ಸಮೀಪವಿರುವ ಈ ಮರದ ಕಾರ್ಖಾನೆಗೆ ಮೃತರ ಸಂಬಂಧಿಕರು ಬಂದು ತಮಗೆ ಕಟ್ಟಿಗೆ ಅಥವಾ ಪೆಟ್ಟಿಗೆಗೆ ಬೇಕಾದ ಹಲಗೆ ಬೇಕು ಎಂದು ಕೇಳಿದರೆ ಅವರಿಗೆ ಬೇಕಾದಷ್ಟು ಹಲಗೆ ಅಥವಾ ಕಟ್ಟಿಗೆ ಉಚಿತವಾಗಿ ನೀಡಲು ಈ ಮರದ ಮಿಲ್ ಮಾಲಕ ಸಿ.ಪಿ ಸೈಮನ್ ಸದಾ ಸನ್ನದ್ದರಾಗಿರುತ್ತಾರೆ.
ಇದು ಇಂದು ನಿನ್ನೆಯಿಂದ ನಡೆದುಕೊಂಡು ಬಂದ ವಿಚಾರವಲ್ಲ. ಇದು ಸಿ.ಪಿ ಸೈಮನ್ ಅವರ ತಂದೆ ಸಿ.ಫಿಲಿಪ್ ಅವರ ಕಾಲದಿಂದಲೇ ನಡೆದುಕೊಂಡು ಬರುತ್ತಿರುವ ಉಚಿತ ಸೇವೆ. ಸಿ. ಫಿಲಿಪ್ ಅವರು ಕಡಬ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷರಾಗಿದ್ದು, ಕಡಬ ತಾಲೂಕು ಆಗಲು ಮುತುವರ್ಜಿ ವಹಿಸಿದವರು. ಕನಿಷ್ಠ ಅಂದರೂ ಅಂತ್ಯ ಸಂಸ್ಕಾರದ ಕಟ್ಟಿಗೆಗೆ ಮತ್ತು ಹಲಗೆಗೆ ಎರಡು ಸಾವಿರ ರೂಪಾಯಿಗಿಂತಲೂ ಹೆಚ್ಚಿನ ಹಣ ಬೇಕಾಗುತ್ತದೆ. ಆದರೆ ಇಲ್ಲಿ ಯಾವುದೇ ಹಣ ಪಾವತಿ ಮಾಡಬೇಕಾಗಿಲ್ಲ.
'ನಾವು ಈ ಸಂಸ್ಥೆಯನ್ನು 1975 ರ ಡಿಸೆಂಬರ್ 25 ರಂದು ಪ್ರಾರಂಭಿಸಿದೆವು. ಇಲ್ಲಿಯ ಯಾವುದೇ ಧರ್ಮದವರು ಮರಣ ಹೊಂದಿದರೂ ಅವರಿಗೆ ಕಟ್ಟಿಗೆಯನ್ನು ನೀಡುವ ಕಾರ್ಯ ಮಡುತ್ತಿದ್ದೇವೆ. ನಮ್ಮ ತಂದೆಯವರು ಪ್ರಾರಂಭಿಸಿದ ಈ ಕಾರ್ಯವನ್ನು ನಾನು ಮುಂದುವರಿಸಿಕೊಂಡು ಹೋಗುತ್ತಿದ್ದೇನೆ. ಈ ಸುತ್ತಮುತ್ತಲಿನ ಸುಮಾರು 10 ಗ್ರಾಮದ ಬಡ ಕುಟುಂಬಗಳಿಗೆ ಸಹಾಯ ಮಾಡಿಕೊಂಡು ಬಂದಿದ್ದೇವೆ. ನನ್ನ ಕೈಲಾದ ಸಹಾಯವನ್ನು ನಾನು ಮುಂದೆಯೂ ಮಾಡಲು ಬದ್ದನಿದ್ದೇನೆ' ಎಂದು ಹೇಳುತ್ತಾರೆ ಸಿ.ಪಿ ಸೈಮನ್.
1975 ರಲ್ಲಿ ಆರಂಭವಾದ ಈ ಮರದ ಕಾರ್ಖಾನೆಯಿಂದ ಈತನಕ ಕಡಬ ತಾಲೂಕಿನಾದ್ಯಂತ ಸಾವಿರಾರು ಮಂದಿಗೆ ಹಲಗೆ ಹಾಗೂ ಕಟ್ಟಿಗೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗಿದೆ. ಕೊರೊನಾ ಸಮಯದಲ್ಲಿ ಹಲವಾರು ಮಂದಿಗೆ ಇವರ ಪ್ರಚಾರವಿಲ್ಲದ ಸೇವೆ ಆಶ್ರಯವಾಗುತ್ತಿದೆ.
ಇದನ್ನೂ ಓದಿ: ಮಂಗಳೂರು ಏರ್ಪೋರ್ಟ್ ಸಿಐಎಸ್ಎಫ್ ಕಚೇರಿಗೆ ಬಂತು 'ಟೆರರಿಸ್ಟ್' ಇ-ಮೇಲ್!