ಮಂಗಳೂರು: ನಗರದ ಜ್ಯುವೆಲ್ಲರಿಯೊಂದಕ್ಕೆ ದುಷ್ಕರ್ಮಿಗಳು ಕನ್ನ ಹಾಕಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದೊಯ್ದಿರುವ ಘಟನೆ ನಗರದ ಭವಂತಿ ರಸ್ತೆಯಲ್ಲಿ ನಡೆದಿದೆ.
ಅನಿಲ್ ಶೇಟ್ ಎಂಬುವರ ಜ್ಯುವೆಲ್ಲರಿಗೆ ಖದೀಮರು ಕನ್ನ ಹಾಕಿದ್ದಾರೆ. ಜ್ಯುವೆಲ್ಲರ್ನ ಹಿಂಭಾಗದ ಗೋಡೆಯಲ್ಲಿ ಎರಡು ಅಡಿ ಚೌಕ ಅಳತೆಯಲ್ಲಿ ಗೋಡೆ ಕೊರೆದು ಅಂಗಡಿಯ ಒಳನುಗ್ಗಿ ಚಿನ್ನಾಭರಣಗಳನ್ನು ಕಳವು ಮಾಡಲಾಗಿದೆ.
ಒಳ ಪ್ರವೇಶಿಸಿದ ಕಳ್ಳರು ಕಬ್ಬಿಣದ ಬಾಕ್ಸ್ವೊಂದರಲ್ಲಿ ಚಿನ್ನಾಭರಣವಿರಿಸಿದ್ದ ಸಣ್ಣ ಬಾಕ್ಸ್ ತೆರೆದು ಕಳವು ಮಾಡಿದ್ದಾರೆ. ಬಳಿಕ ಬಾಕ್ಸ್ಗಳ ಕವರ್ಗಳನ್ನು ಮಳಿಗೆಯಲ್ಲಿ ಬಿಸಾಡಿ ಪರಾರಿಯಾಗಿದ್ದಾರೆ. ಗಣೇಶ ಚತುರ್ಥಿಯ ಹಿನ್ನೆಲೆಯಲ್ಲಿ ಸೋಮವಾರ ಅಂಗಡಿ ಬಂದ್ ಆಗಿತ್ತು. ಇಂದು ಬೆಳಗ್ಗೆ ಮಳಿಗೆಯ ಬಾಗಿಲು ತೆರೆದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಈ ಕುರಿತು ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.