ದಕ್ಷಿಣ ಕನ್ನಡ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿರುದ್ಧ ಅವಹೇಳನಕಾರಿಯಾಗಿ ಸಂದೇಶ ಹರಡಿದ ಆರೋಪದಡಿ ಕಡಬ ತಾಲೂಕು ಭೂಮಾಪನ ಇಲಾಖಾ ಸಿಬ್ಬಂದಿ ಮಹೇಶ್ ಎಂಬಾತನನ್ನು ಇಂದು ಕಡಬ ಪೊಲೀಸರು ಬಂಧಿಸಿದ್ದಾರೆ.
ಇಂದು ಸಂಜೆ ಕಡಬ ಠಾಣೆಗೆ ಆಗಮಿಸಿದ ಕಡಬದ ಕೆಲವರು ಪೊಲೀಸರಿಗೆ ದೂರು ನೀಡಿದರು. ಕಳೆದ ಹಲವು ದಿನಗಳಿಂದ ಆರೋಪಿ ಮಹೇಶ್ ತಾನೋರ್ವ ಸರ್ಕಾರಿ ಉದ್ಯೋಗಿ ಎಂಬುದನ್ನು ಮರೆತು ರಾಜ್ಯದ ಸಿಎಂ, ಪ್ರಧಾನಿ ಹಾಗೂ ಆರ್ ಎಸ್ ಎಸ್ ಬಗ್ಗೆ ಕೀಳು ಮಟ್ಟದ ಪದ ಬಳಕೆ ಮಾಡಿ ಅವಹೇಳಕಾರಿ ಸಂದೇಶಗಳನ್ನ ತನ್ನ ಫೇಸ್‍ಬುಕ್ ಖಾತೆ ಹಾಗೂ ವಾಟ್ಸ್ಆ್ಯಪ್ ಸ್ಟೇಟಸ್ ಗಳಲ್ಲಿ ಹಾಕಿಕೊಳ್ಳುತ್ತಿದ್ದ ಎಂದು ಆರೋಪಿಸಿದರು.
![A derogatory message Against CM, PM, RSS: accused arrest by Police](https://etvbharatimages.akamaized.net/etvbharat/prod-images/4155293_thum.jpg)
ಈ ಹಿನ್ನೆಲೆಯಲ್ಲಿ ಆರೋಪಿ ಮಹೇಶ್‍ನನ್ನು ಸೇವೆಯಿಂದ ವಜಾಗೊಳಿಸಿ ಆತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘಟನೆಯೊಂದರ ಮುಖಂಡ ವೆಂಕಟರಮಣ ಕೋಡಿಂಬಾಳ ಆಗ್ರಹಿಸಿದ್ದಾರೆ. ಒಂದು ವೇಳೆ ಆರೋಪಿಯ ವಿರುದ್ಧ ಕ್ರಮಕೈಗೊಳ್ಳದಿದ್ದಲ್ಲಿ ಕಡಬ ತಾಲೂಕು ಬಂದ್‍ಗೆ ಕರೆ ನೀಡಿ ಉಗ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಸಾರ್ವಜನಿಕರಿಂದ ಆರೋಪದ ಸುರಿಮಳೆ
ಕಡಬ ತಾಲೂಕಿನ ಬಹುತೇಕ ಗ್ರಾಮ ಸಭೆಗಳಲ್ಲಿ ಸರ್ವೆ ಇಲಾಖೆಯಲ್ಲಿ ಮಹೇಶ್ ನ ಕಾರ್ಯ ವೈಖರಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಈತನ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿದ್ದಾರೆ. ಈತನಿಗೆ ದುಡ್ಡು ಕೊಡದಿದ್ದರೆ ನಾನಾ ಕಾರಣ ಹೇಳಿ ತಮ್ಮ ಕೆಲಸವನ್ನು ಮುಂದೂಡುತ್ತಾನೆ ಎನ್ನುವ ಆರೋಪ ಸಾರ್ವಜನಿಕ ವಲಯದಲ್ಲೂ ವ್ಯಕ್ತವಾಗುತ್ತಿದೆ.