ಬಂಟ್ವಾಳ: ಬಂಟ್ವಾಳದ ಗೂಡಿನ ಬಳಿಯಲ್ಲಿರುವ ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿದ್ಯಾರ್ಥಿ ಸೃಜನ್ ಪೂಜಾರಿ 24 ಅಡಿ ಆಳದ ಬಾವಿ ತೋಡಿ ಅಚ್ಚರಿ ಮೂಡಿಸಿದ್ದಾನೆ. ಸೃಜನ್ ನರಿಕೊಂಬು ನಾಯಿಲ ಗ್ರಾಮದ ಲೋಕನಾಥ್ ಪೂಜಾರಿ, ಮೋಹಿನಿ ದಂಪತಿ ಪುತ್ರ. ಈತ ತನ್ನ ಮನೆಯಲ್ಲಿ ಕುಡಿಯುವ ನೀರಿಲ್ಲ ಎಂದಾಗ ಅದಕ್ಕೊಂದು ಪರಿಹಾರವನ್ನೇ ಕಂಡುಕೊಂಡಿದ್ದಾನೆ.
ಸ್ವತಃ ಮನೆಯ ಹಿತ್ತಿಲಲ್ಲಿದ್ದ ಜಾಗದಲ್ಲಿ ತನ್ನ ಪಾಡಿಗೆ ಗುಂಡಿ ತೋಡಿದ್ದು, ಅದೀಗ 24 ಅಡಿ ಆಳದ ಬಾವಿ ಆಗಿ ಮಾರ್ಪಟ್ಟಿದೆ. ಈ ಬಾವಿಯಲ್ಲಿ ಸೊಂಟ ಮುಳುಗುವಷ್ಟು ನೀರು ದೊರಕಿದೆ. ಬಾಲಕನ ಭಗೀರಥ ಪ್ರಯತ್ನಕ್ಕೆ ಸುತ್ತಮುತ್ತಲಿನವರೆಲ್ಲರೂ ಭೇಷ್ ಎನ್ನುತ್ತಿದ್ದಾರೆ. ಸಾಮಾನ್ಯವಾಗಿ ಬಾವಿ ತೋಡುವಾಗ ನೀರಿನ ಸೆಲೆ ಹುಡುಕಲು ಒದ್ದಾಡುವವರಿದ್ದಾರೆ. ಆದರೆ ಇಲ್ಲಿ ನೀರು ಸಿಗಬಹುದು ಎಂದು ಸೃಜನ್ ಅರಿತುಕೊಂಡಿದ್ದು, ಮತ್ತು ಅದರಲ್ಲಿ ಯಶಸ್ವಿಯೂ ಆಗಿದ್ದು, ಗಮನಾರ್ಹ.
‘’ನಾನೇ ನೋಡಿದ ಜಾಗವಿದು’’ ಎಂದು ಸೃಜನ್ ಹೇಳುತ್ತಾನೆ. ‘’ನಮಗೆ ಕುಡಿಯುವ ನೀರಿನ ಸಮಸ್ಯೆ ಹಲವು ಸಮಯಗಳಿಂದ ಇತ್ತು. ಹೀಗಾಗಿ ನಮ್ಮದೇ ಜಾಗದಲ್ಲಿ ಬಾವಿ ತೋಡಿದರೆ ಹೇಗೆ ಎಂದು ಆಲೋಚಿಸಿದೆ. ಈ ಜಾಗದಲ್ಲಿ ನೀರು ಸಿಗಬಹುದು ಎಂದು ನನ್ನ ಮನಸ್ಸಿಗೆ ಅನಿಸಿತು. ಕಳೆದ ಡಿಸೆಂಬರ್ನಲ್ಲಿ ಬಿಡುವಿದ್ದಾಗ ಬಾವಿ ತೋಡಲು ಆರಂಭಿಸಿದೆ. ಅದಾದ ನಂತರ ಕಾಲೇಜಿಗೆ ಹೋಗಲಿದ್ದ ಕಾರಣ, ಮಾಡಿರಲಿಲ್ಲ. ಬಳಿಕ ಪ್ರಥಮ ಪಿಯುಸಿ ರಜೆ ಸಿಕ್ಕಿದ ನಂತರ ಮತ್ತೆ ಕೆಲಸ ಶುರುಮಾಡಿದೆ. ಮಣ್ಣು ಅಗೆದ ಬಳಿಕ ಭಟ್ಟಿಯಲ್ಲಿ ಅದನ್ನು ಹಾಕಿ, ಕೊಳಿಕೆಯಲ್ಲಿ ಸಿಕ್ಕಿಸಿ ಮೇಲಕ್ಕೆ ಎಳೆಯುತ್ತಿದ್ದೆ. ಮೇಲಕ್ಕೆ ಹೋಗಿ ಅದನ್ನು ಹಾಕುತ್ತಿದ್ದೆ. ಹೀಗೆ ಪ್ರತಿದಿನ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕೆಲಸ ಮಾಡುತ್ತಿದ್ದೆ. ಸ್ವಲ್ಪ ವಿಶ್ರಾಂತಿಯ ಬಳಿಕ ಸಂಜೆ ಪುನಃ ಕೆಲಸ. ನೋಡನೋಡುತ್ತಿದ್ದಂತೆ ಬಾವಿ ಆಳವಾಗುತ್ತಾ ಹೋಯಿತು. ನೀರು ಸಿಗುವ ಸೂಚನೆಯೂ ದೊರಕಿತು. ಸುಮಾರು ನಾಲ್ಕು ಅಡಿ ಸುತ್ತಳತೆಯಲ್ಲಿ ತೋಡಿದ ಬಾವಿಯನ್ನು 24 ಅಡಿಯಷ್ಟು ಕೊರೆದಿದ್ದೇನೆ. ಈಗ ನೀರು ಸಿಕ್ಕಿದೆ. ಕಷ್ಟಪಟ್ಟಿದ್ದಕ್ಕೆ ಪ್ರತಿಫಲ ದೊರಕಿದೆ’’ ಎಂದು ಸೃಜನ್ ಪೂಜಾರಿ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ.
ಇನ್ನು ಮಗನ ಸಾಧನೆ ಕುರಿತು ಮಾತನಾಡಿದ ಸೃಜನ್ ತಾಯಿ ಮೋಹಿನಿ ಸಂತಸ ವ್ಯಕ್ತಪಡಿಸಿದ್ದಾರೆ. ’’ತಮ್ಮ ಮಗ ಯಾವಾಗಲು ಬಾವಿ ತೋಡುತ್ತೇನೆ ಎಂದು ಹೇಳುತ್ತಿದ್ದ. ನೀವು ಬಾವಿ ಸುತ್ತಳತೆಗೆ ಅಳತೆ ಹಾಕಿ ಕೊಡಿ ಎಂದಿದ್ದ. ಆದರೆ, ಆಗ ನನಗೆ ಹುಷಾರಿರಲಿಲ್ಲ. ಹಾಗಾಗಿ ನೀನೇ ತೋಡು ಎಂದಿದ್ದೆ. ಕೊನೆಗೆ ಅವನೇ ಸ್ವಲ್ಪ ದಿನದ ಮೊದಲು ತೋಡಲು ಆರಂಭಿಸಿ ಗುಂಡಿ ತೋಡಿದ್ದ. ನಂತರ ಗುಂಡಿ ತೋಡುವ ಕೆಲಸವನ್ನು ಶಾಲೆ ಶುರುವಾಗಿದ್ದ ಕಾರಣ ಬಿಟ್ಟಿದ್ದ. ಈ ಬಾರಿ ರಜೆ ಸಿಕ್ಕಿದ ನಂತರ ಪುನಃ ತೋಡಲು ಶುರುಮಾಡಿದ್ದ. ಒಬ್ಬನೇ ಬಾವಿ ತೋಡುತ್ತಿದ್ದ. ಆ ಸಂದರ್ಭದಲ್ಲಿ ನೆರೆಕೆರೆಯವರು ಎಲ್ಲರು ಬಂದು ಈತನ ಕೆಲಸವನ್ನು ನೋಡಿ ಶ್ಲಾಘಿಸುತ್ತಿದ್ದರು. ನಿನ್ನ ಈ ಸಾಹಸ ಒಳ್ಳೆದಿದೆ, ಮುಂದುವರಿ ಎನ್ನುತ್ತಿದ್ದರು. ಮಕ್ಕಳಿಂದ ಹಿಡಿದು ಊರಿನವರೆಲ್ಲ ಬರುತ್ತಿದ್ದಾರೆ. ನನ್ನ ಮಗನಿಗೆ ನೀನು ಈ ಕಾರ್ಯ ಮಾಡಿದ್ದು ಸಾರ್ಥಕವಾಯಿತಲ್ಲ ಎನ್ನುತ್ತಿದ್ದಾರೆ. ಎಲ್ಲರಿಗೂ ತುಂಬಾ ಖುಷಿ ಎಂದು ತಮ್ಮ ಮಗನ ಸಾಧನೆ ಬಗ್ಗೆ ಹೆಮ್ಮೆಯ ಮಾತನಾಡಿದರು‘‘.
ಇದನ್ನೂ ಓದಿ: ಆಟವಾಡುತ್ತಲೇ ಬಾವಿ ತೋಡಿ ಆಧುನಿಕ ಭಗೀರಥರಾದ ಬೆಳ್ತಂಗಡಿಯ ಚಿಣ್ಣರು!