ಉಳ್ಳಾಲ (ದಕ್ಷಿಣ ಕನ್ನಡ) : ರಾಜ್ಯ ಕಾಂಗ್ರೆಸ್ ಸರ್ಕಾರ ಉಚಿತ ವಿದ್ಯುತ್ ಯೋಜನೆ ಘೋಷಣೆ ಮಾಡಿರುವ ಬೆನ್ನಲ್ಲೇ ಉಳ್ಳಾಲದಲ್ಲಿ ಮನೆಯೊಂದಕ್ಕೆ 7 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿದೆ. ಬಿಲ್ ಕಂಡ ಮನೆ ಮಾಲೀಕರು ದಂಗಾಗಿದ್ದಾರೆ. ಉಳ್ಳಾಲಬೈಲ್ ನಿವಾಸಿ ಸದಾಶಿವ ಆಚಾರ್ಯ ಎಂಬವರ ಮನೆಗೆ ನೀಡಲಾದ ವಿದ್ಯುತ್ ಬಿಲ್ ಬೆಚ್ಚಿಬೀಳಿಸುವಂತೆ ಮಾಡಿದೆ.
"ವಿದ್ಯುತ್ ಬಿಲ್ನಲ್ಲಿ 99,338 ಯೂನಿಟ್ ವಿದ್ಯುತ್ ಖರ್ಚಾಗಿದ್ದು 7,71,072 ರೂಪಾಯಿ ಬಿಲ್ ನಮೂದಿಸಲಾಗಿದೆ. ತಮಗೆ ಈ ಮೊದಲು ಕೇವಲ 3,000 ರೂಪಾಯಿಯಷ್ಟು ಮಾಸಿಕ ವಿದ್ಯುತ್ ಬಿಲ್ ಬರುತ್ತಿತ್ತು. ನಾವು ಪ್ರತಿ ತಿಂಗಳು ಬಿಲ್ ಕಟ್ಟುತ್ತೇವೆ. ಈ ತಿಂಗಳು ಬಂದ ಬಿಲ್ಲನ್ನು ನೋಡಿ ಮನೆ ಮಂದಿಯೆಲ್ಲ ನಿಜಕ್ಕೂ ಶಾಕ್ ಆದೆವು" ಎಂದು ಮನೆ ಮಾಲೀಕ ಸದಾಶಿವ ಆಚಾರ್ಯ ತಿಳಿಸಿದರು. ಸಿಬ್ಬಂದಿಯಲ್ಲಿ ಕೇಳಿದ್ದಕ್ಕೆ ಕಚೇರಿಗೆ ತೆರಳಿ ವಿಚಾರಿಸುವಂತೆ ತಿಳಿಸಿರುವುದಾಗಿ ಅವರು ಹೇಳಿದ್ದಾರೆ.
"ಏಜೆನ್ಸಿಗಳ ಮುಖಾಂತರ ಬಿಲ್ ಕಲೆಕ್ಷನ್ ಮಾಡಲಾಗುತ್ತದೆ. ಬಿಲ್ ರೀಡರ್ನ ಎಡವಟ್ಟಿನಿಂದಾಗಿ ತಪ್ಪಾಗಿ ವಿದ್ಯುತ್ ಬಿಲ್ ಮುದ್ರಣವಾಗಿದೆ. ವಿದ್ಯುತ್ ಬಿಲ್ನಲ್ಲಿ ದೋಷ ಕಂಡುಬಂದರೆ ಅದನ್ನು ಗ್ರಾಹಕರಿಗೆ ಕೊಡುವಂತಿಲ್ಲ. ತಕ್ಷಣವೇ ಸದಾಶಿವ ಆಚಾರ್ಯ ಅವರ ಮನೆಗೆ ಪರಿಷ್ಕೃತ ಬಿಲ್ ತಲುಪಿಸಲಾಗುವುದು" ಎಂದು ಉಳ್ಳಾಲ ಮೆಸ್ಕಾಂ ಉಪವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ದಯಾನಂದ ತಿಳಿಸಿದ್ದಾರೆ.
ಇಂದು ಮಧ್ಯಾಹ್ನ 2,833 ರೂಪಾಯಿಗಳ ಪರಿಷ್ಕೃತ ವಿದ್ಯುತ್ ಬಿಲ್ ಅನ್ನು ಸದಾಶಿವ ಆಚಾರ್ಯರ ಮನೆಗೆ ತಲುಪಿಸಲಾಗಿದೆ.
ವಿದ್ಯುತ್ ದರ ಇಳಿಸುವಂತೆ ಬೆಳಗಾವಿಯಲ್ಲಿ ನೇಕಾರರ ಪ್ರತಿಭಟನೆ : ಏಪ್ರಿಲ್ನಿಂದ ಅನ್ವಯವಾಗುವಂತೆ ಪ್ರತಿ ಯೂನಿಟ್ಗೆ ಹೆಚ್ಚಿಸಿರುವ ವಿದ್ಯುತ್ ದರ ಜನರಿಗೆ ಹೊರೆಯಾಗಿ ಪರಿಣಮಿಸಿದೆ. ಈ ಸಂಬಂಧ ಜನರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಜೂನ್ 14ರಂದು ನೇಕಾರರು ವಿದ್ಯುತ್ ದರ ಇಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಉತ್ತರ ಕರ್ನಾಟಕ ವೃತ್ತಿಪರ ನೇಕಾರ ಹೋರಾಟ ಸಮಿತಿ ನೇತೃತ್ವದಲ್ಲಿ ಸಾವಿರಾರು ನೇಕಾರರು ನಗರದ ಖಾಸಬಾಗ ಬಸವೇಶ್ವರ ವೃತ್ತದಿಂದ ಬೈಕ್ ಜಾಥಾ ನಡೆಸಿದರು. ನಾಥಪೈ ವೃತ್ತ, ಗೋವಾವೇಸ್, ರೈಲ್ವೆ ಮೇಲ್ಸೇತುವೆ, ಸಂಭಾಜಿ ವೃತ್ತ, ಲಿಂಗರಾಜ ಕಾಲೇಜು ರಸ್ತೆ, ಚೆನ್ನಮ್ಮ ವೃತ್ತ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯುದ್ದಕ್ಕೂ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ನೇಕಾರರು, ನಮ್ಮ ಬೇಡಿಕೆ ಈಡೇರಿಸುವವರೆಗೂ, ನಾವು ಯಾರೂ ವಿದ್ಯುತ್ ಬಿಲ್ ಕಟ್ಟುವುದಿಲ್ಲ ಎಂದು ಹೇಳಿದರು. ಅಲ್ಲದೆ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಗಜಾನನ ಗುಂಜೇರಿ, ನಾಗರಾಜ ಹೂಗಾರ, ಆನಂದ ಉಪರಿ, ಲೋಹಿತ್ ಮೊರಕರ್, ವೆಂಕಟೇಶ್ ಸೊಂಟಕ್ಕಿ, ಪಾಂಡುರಂಗ ಕಾಮಕರ್, ನಾರಾಯಣ ಕುಲಗೋಡ ಸೇರಿ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ : Electricity rate hike: ವಿದ್ಯುತ್ ದರ ಹೆಚ್ಚಳದ ವಿರುದ್ಧ ಎಂಎಸ್‌ಎಂಇಗಳಿಂದ ಪ್ರತಿಭಟನೆಯ ಎಚ್ಚರಿಕೆ