ಮಂಗಳೂರು (ದ.ಕ): ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಮನೆಮಾಡಿದೆ. ಕೆಲವು ದಿನಗಳಿಂದ ಉಳ್ಳಾಲದಲ್ಲಿ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿದೆ.
ಉಳ್ಳಾಲ ನಗರಸಭಾ ವ್ಯಾಪ್ತಿಯ ಪೆರ್ಮನ್ನೂರು ಗ್ರಾಮದ ಕಲ್ಲಾಪುವಿನಲ್ಲಿ 7 ದಿನದ ಮಗುವಿಗೆ ಇಂದು ಸೊಂಕು ದೃಢವಾಗಿದೆ. ಮೂಲತಃ ಬಾಗಲಕೋಟೆಯ ಹುನಗುಂದ ತಾಲೂಕಿನ ಮಹಿಳೆ ಮತ್ತು ಆಕೆಯ ಪತಿ ತೊಕ್ಕೊಟಿನ ಕಲ್ಲಾಪಿನ ಜಿನಸು ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದು, ಅಲ್ಲೇ ಪಕ್ಕದಲ್ಲಿ ವಾಸವಾಗಿದ್ದರು.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆಗೆ ಜೂ. 30ರಂದು ಹೆರಿಗೆಯಾಗಿದ್ದು, ಹೆರಿಗೆಯ ಮೊದಲು ಮಹಿಳೆಗೆ ಗಂಟಲುದ್ರವ ಪರೀಕ್ಷೆ ನಡೆಸಿದ್ದು ಸೋಂಕು ದೃಢವಾಗಿತ್ತು. ಇದೀಗ ಮಹಿಳೆಯ 7 ದಿನದ ಮಗುವಿಗೂ ಸೋಂಕು ದೃಢವಾಗಿದೆ. ಕೋವಿಡ್ ಆಸ್ಪತ್ರೆಯಲ್ಲಿ ತಾಯಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.