ಮಂಗಳೂರು : ವಿಧಾನಸಭಾ ಚುನಾವಣೆಗೆ ಭರದ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಪಕ್ಷ, ತನ್ನ ಗ್ಯಾರಂಟಿ ಘೋಷಣೆಗಳನ್ನು ಮುಂದುವರೆಸಿದೆ. ಇಂದು ಮಂಗಳೂರಿನಲ್ಲಿ ನಡೆದ ಬಹಿರಂಗ ಸಮಾರಂಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪಕ್ಷದ 5ನೇ ಗ್ಯಾರಂಟಿ ಘೋಷಣೆಯನ್ನು ನೀಡಿದರು. ಕಾಂಗ್ರೆಸ್ ಪಕ್ಷ ಗೆದ್ದು ಬಂದರೆ ರಾಜ್ಯದ ಎಲ್ಲ ಮಹಿಳೆಯರಿಗೆ ಸರ್ಕಾರಿ ಸಾರಿಗೆ ಬಸ್ನಲ್ಲಿ ಉಚಿತ ಪ್ರಯಾಣ ಸೇವೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.
ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ ನಮ್ಮ ಸರ್ಕಾರ ಬಂದ ಮೊದಲ ದಿನದ ಮೊದಲ ಕ್ಯಾಬಿನೆಟ್ ನಲ್ಲಿ ನಾಲ್ಕು ಭರವಸೆಗಳನ್ನು ಮಾತ್ರವಲ್ಲ, ಐದು ಭರವಸೆಗಳನ್ನು ಈಡೇರಿಸುತ್ತೇವೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೆ ಕಿವಿಗೊಟ್ಟಿ ಕೇಳಿ. ನಾವು ನಾಲ್ಕನೆ ಭರವಸೆಯ ಜೊತೆಗೆ ಮಹಿಳೆಯರಿಗಾಗಿ ಹೊಸ ಭರವಸೆ ನೀಡುತ್ತಿದ್ದೇವೆ. ನಮ್ಮ ಸರ್ಕಾರ ಅವಧಿಯಲ್ಲಿ ಮಹಿಳೆಯರಿಗೆ ಸರ್ಕಾರಿ ಬಸ್ ನಲ್ಲಿ ಉಚಿತ ಪ್ರಯಾಣವನ್ನು ನೀಡುತ್ತೇವೆ ಎಂದರು.
ಕೆಲವು ವರ್ಷಗಳಿಂದ ಇಲ್ಲಿ ಬಿಜೆಪಿ ಸರ್ಕಾರ ಇದೆ. ಈ ಸರ್ಕಾರವನ್ನು ನೀವು ನಿಮ್ಮ ಮತದಿಂದ ಆಯ್ಕೆ ಮಾಡಿಲ್ಲ. ಬಿಜೆಪಿ ಅವರು ಕಳ್ಳತನದಿಂದ ಪ್ರಜಾಪ್ರಭುತ್ವ ಧ್ವಂಸ ಮಾಡಿದ್ದು, ಭ್ರಷ್ಟಾಚಾರದ ಹಣದಿಂದ ಖರೀದಿ ಮಾಡಿ ತಮ್ಮ ಸರ್ಕಾರ ರಚಿಸಿದ್ದಾರೆ. ಅವರಿಗೆ ಕಳ್ಳತನ ಮಾಡುವುದು ಅಭ್ಯಾಸ ಆಗಿದೆ. ಇವರ ಕೈಯಲ್ಲಿ ಎಂಎಲ್ಎ, ಕಂಟ್ರಾಕ್ಟರ್ ಗಳ ಹಣ, ಸುಗರ್ ಫ್ಯಾಕ್ಟರಿ ಕಳ್ಳತನ ಮಾಡುವುದು ಅಭ್ಯಾಸವಾಗಿದೆ ಎಂದು ರಾಹುಲ್ ಗಾಂಧಿ ಕಿಡಿಕಾರಿದರು.
ಒಬ್ಬ ಬಿಜೆಪಿ ನಾಯಕ ಹೇಳುತ್ತಾರೆ. ಕರ್ನಾಟಕವನ್ನು ಮೋದಿ ಕೈಯಲ್ಲಿ ಕೊಡುವ ಸರ್ಕಾರ ಎನ್ನುತ್ತಾರೆ. ಈಗಲೂ ಬಿಜೆಪಿ ಕೈಯಲ್ಲಿದೆ. ನಿಮಗೆ 40% ಭ್ರಷ್ಟಾಚಾರದ ಸರ್ಕಾರ ಬೇಡ. ಎಲ್ಲಾ ವಿಚಾರದಲ್ಲಿಯೂ 40 % ಭ್ರಷ್ಟಾಚಾರ ಇವರು ಮಾಡುತ್ತಾರೆ. ಬಿಜೆಪಿ ಶಾಸಕರೇ ಹೇಳಿದ್ದರು ಬಿಜೆಪಿಯಿಂದ ಸಿಎಂ ಆಗಲು 2500 ಕೋಟಿ ರೂ. ಕೇಳಿದ್ದರು ಎಂದು. ಇದೀಗ ಖರೀದಿ ಮಾಡಿದವರ ಅಸಲಿಯತ್ತು ಗೊತ್ತಾಯಿತು ಎಂದು ರಾಹುಲ್ ಗಾಂಧಿ ಹೇಳಿದರು.
ಕಾಂಟ್ರಾಕ್ಟರ್ ಅಸೋಸಿಯೇಷನ್ ನವರು ಪ್ರಧಾನಮಂತ್ರಿಗೆ ಪತ್ರ ಬರೆಯುತ್ತಾರೆ. ಪ್ರಧಾನಮಂತ್ರಿ ಆ ಪತ್ರಕ್ಕೆ ಉತ್ತರವನ್ನು ನೀಡಿಲ್ಲ. ಶಿರಹಟ್ಟಿಯ ಫಕ್ಕಿರೇಶ್ವರ ಮಠದ ದಿಂಗಾಲೇಶ್ವರ ಸ್ವಾಮೀಜಿಯವರು ನಮಗೆ ಪರ್ಸಂಟೇಜ್ನಲ್ಲಿ ಡಿಸ್ಕೌಂಟ್ ಕೊಟ್ಟು 30 % ತೆಗೆದುಕೊಂಡಿದ್ದಾರೆ. ಭ್ರಷ್ಟಾಚಾರವೇ ಇವರ ಧರ್ಮವಾಗಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಒಂದು ಕಡೆ ಭ್ರಷ್ಟಾಚಾರ ಆದರೆ ಮತ್ತೊಂದೆಡೆ ತೀವ್ರ ಬೆಲೆ ಏರಿಕೆ ಆಗಿದೆ. ಪೆಟ್ರೋಲ್, ಗ್ಯಾಸ್ ಬೆಲೆ ತುಟ್ಟಿ ಆಗಿದೆ. ಸಣ್ಣ ಉದ್ಯಮಿಗಳಿಗೆ ಜಿಎಸ್ಟಿ ಬರೆ ತಂದಿದೆ. ನೋಟು ಅಮಾನ್ಯೀಕರಣ ಬದುಕು ಕಸಿದಿದೆ. ಕರ್ನಾಟಕದಲ್ಲಿ ಹಣಕ್ಕೆ ಕೊರತೆ ಇಲ್ಲ. ಈ ಎಲ್ಲಾ ಯೋಜನೆಗಳನ್ನು ಇದನ್ನು ಬಹಳ ನಿಷ್ಠಾವಂತ ಸರ್ಕಾರ ಮಾಡಬಹುದು. ಕಾಂಗ್ರೆಸ್ ಪಕ್ಷದ ಮೊದಲ ಕ್ಯಾಬಿನೆಟ್ ಅನುಷ್ಠಾನಕ್ಕೆ ಐದು ಭರವಸೆ ಅನುಷ್ಠಾನಕ್ಕೆ ತರುತ್ತೇವೆ ಎಂದು ರಾಹುಲ್ ಗಾಂಧಿ ಭರವಸೆ ಕೊಟ್ಟರು.
ಕಪ್ಪು ಹಣ ಜಾಸ್ತಿಯಾಯಿತು ಎಂದು ಮಾತನಾಡಿದ್ದಕ್ಕೆ ಸಂಸತ್ನಿಂದ ನನ್ನನ್ನು ಅನರ್ಹ ಮಾಡಿದ್ದಾರೆ. ನನ್ನ ಒಂದೇ ಒಂದು ಪ್ರಶ್ನೆಗೆ ಉತ್ತರ ಕೊಡಿ. ನಿಮಗೂ ಅದಾನಿಗೂ ಸಂಬಂಧವೇನು? ವಿದೇಶಿದಲ್ಲಿರುವ ನಕಲಿ ಕಂಪೆನಿಗಳು ಯಾರಾದು? ಎಂದು ರಾಹುಲ್ ಗಾಂಧಿ ಕೇಳಿದ್ರು.
ಇದನ್ನೂ ಓದಿ : 2024ಕ್ಕೆ ಅಯೋಧ್ಯೆದಲ್ಲಿ ರಾಮಮಂದಿರ ನಿರ್ಮಾಣ ಪೂರ್ಣ: ಯುಪಿ ಸಿಎಂ ಯೋಗಿ ಆದಿತ್ಯನಾಥ್ ಘೋಷಣೆ