ಮಂಗಳೂರು: ಬೀದಿಬದಿ ವ್ಯಾಪಾರಸ್ಥರಿಗೆ ಆತ್ಮ ನಿರ್ಭರ ಯೋಜನೆಯ ಪ್ರಧಾನಮಂತ್ರಿ ಸ್ವನಿಧಿಯಡಿಯಲ್ಲಿ ಕಿರು ಸಾಲ ಯೋಜನೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೊದಲ ಹಂತದಲ್ಲಿ 592 ಬೀದಿಬದಿ ವ್ಯಾಪಾರಿಗಳನ್ನು ಗುರುತಿಸಲಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದ್ದಾರೆ.
ಮಂಗಳೂರು ಮನಪಾ ಮಂಗಳಾ ಸಭಾಂಗಣದಲ್ಲಿ ಈ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಬೀದಿಬದಿ ವ್ಯಾಪಾರಸ್ಥರನ್ನು ಮೇಲ್ದರ್ಜೆಗೇರಿಸಲು ಪ್ರಧಾನಿ ಮೋದಿಯವರು ಸ್ವನಿಧಿಯಡಿಯಲ್ಲಿ ಕಿರು ಸಾಲ ಯೋಜನೆಯನ್ನು ಜಾರಿಗೊಳಿಸಿದ್ದಾರೆ. ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಐದು ಸಾವಿರ ಮಂದಿ ಬೀದಿಬದಿ ವ್ಯಾಪಾರಿಗಳನ್ನು ಈ ಯೋಜನೆಯಡಿ ಗುರುತಿಸಬೇಕೆಂದು ಕೇಂದ್ರ ಸರ್ಕಾರದಿಂದ ಆದೇಶ ಬಂದಿದೆ. ಆದ್ದರಿಂದ ಮೊದಲ ಹಂತದಲ್ಲಿ 592 ಬೀದಿಬದಿ ವ್ಯಾಪಾರಿಗಳೆಂದು ಗುರುತಿಸಿ ಗುರುತಿನ ಚೀಟಿ ನೀಡಲಾಗಿದೆ. ಇದೀಗ ಈ ಯೋಜನೆಯಡಿ 951 ಮಂದಿಯನ್ನು ಗುರುತಿಸಿ ಅವರ ಮಾಹಿತಿಗಳನ್ನು ಆನ್ಲೈನ್ ಮೂಲಕ ಅಪ್ಲೋಡ್ ಮಾಡಲಾಗಿದೆ ಎಂದು ಹೇಳಿದರು.
ಈಗಾಗಲೇ ಬೀದಿಬದಿ ವ್ಯಾಪಾರಿಗಳನ್ನು ಅವರು ವ್ಯಾಪಾರ ಮಾಡುವ ಸ್ಥಳವನ್ನೇ ಗುರುತಿಸಿ ಈ ಯೋಜನೆಯಡಿ ತರಲಾಗುತ್ತದೆ. ಅದೇ ರೀತಿ ಕೊರೊನಾ ಲಾಕ್ಡೌನ್ನಿಂದ ಆರ್ಥಿಕ ಸಂಕಷ್ಟಕ್ಕೊಳಗಾಗಿ ಬೀದಿಬದಿಯಲ್ಲಿ ವ್ಯಾಪಾರ ಮಾಡುವವರಿಗೆ ತಳ್ಳು ಗಾಡಿಯ ಮೂಲಕ ವ್ಯಾಪಾರ ನಡೆಸುವಂತೆ ಸೂಚಿಸಲಾಗುತ್ತದೆ. ಈ ಬಗ್ಗೆ ಸ್ಥಳೀಯ ಮನಪಾ ಸದಸ್ಯರಿಗೆ ಮಾಹಿತಿ ನೀಡದೆ ಬೀದಿಬದಿ ವ್ಯಾಪಾರಿಗಳನ್ನು ಮನಪಾ ಅಧಿಕಾರಿಗಳು ಗುರುತಿಸಿದ್ದು ತಪ್ಪು ಎಂದು ಸದಸ್ಯರು ಹೇಳಿದರು.
ಇದಕ್ಕೆ ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ ಪ್ರತಿಕ್ರಿಯಿಸಿ, ಬೀದಿಬದಿ ವ್ಯಾಪಾರಿಗಳೆಂದು ನಾವು ಯಾರನ್ನು ಗುರುತಿಸುತ್ತೇವೆಯೋ ಅವರು ಕಾನೂನಿನ ವ್ಯಾಪ್ತಿಯೊಳಗೆ ತಮ್ಮ ವ್ಯಾಪಾರವನ್ನು ಮಾಡಬೇಕಾಗುತ್ತದೆ. ತಪ್ಪಾದ ಸ್ಥಳಗಳಲ್ಲಿ ವ್ಯಾಪಾರ ಮಾಡುವಂತಿಲ್ಲ. ಎಲ್ಲೆಂದರಲ್ಲಿ ತ್ಯಾಜ್ಯವನ್ನು ಇರಿಸಿ ಹೋಗುವಂತಿಲ್ಲ. ತಳ್ಳುಗಾಡಿಯವರು ಗಾಡಿಗಳನ್ನು ತಳ್ಳಿಕೊಂಡೇ ಹೋಗಬೇಕು. ಎಲ್ಲೆಂದರಲ್ಲಿ ನಿಲ್ಲುವಂತಿಲ್ಲ ಎಂದು ಹೇಳಿದರು.