ಮಂಗಳೂರು: ಗ್ರಾಮ ಲೆಕ್ಕಿಗ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಹಾಸನದ ವ್ಯಕ್ತಿಯೊಬ್ಬರಿಗೆ 40 ಲಕ್ಷ ರೂ. ವಂಚಿಸಿರುವ ಬಗ್ಗೆ ಮಂಗಳೂರಿನ ಸೈಬರ್ ಮತ್ತು ಆರ್ಥಿಕ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ ಜಿಲ್ಲೆಯ ಆಲೂರು ನಿವಾಸಿ ಕೃಷ್ಣ ಗೌಡ ಎಂಬುವರು ವಂಚನೆಗೊಳಗಾದ ಬಗ್ಗೆ ದೂರು ನೀಡಿದವರು. ತಮ್ಮ ಮಗ ದರ್ಶನ್ಗೆ ಗ್ರಾಮ ಲೆಕ್ಕಾಧಿಕಾರಿ ಉದ್ಯೋಗ ಸಿಗಲಿದೆ ಎಂದು ನಂಬಿ 40 ಲಕ್ಷ ಕಳೆದುಕೊಂಡಿದ್ದಾರೆ. ಇವರಿಗೆ ಬೆಂಗಳೂರಿನ ನಾಗಭೂಷಣ್, ಮಂಗಳೂರಿನ ವಾಮಂಜೂರು ನಿವಾಸಿ ನಾರಾಯಣ ಸ್ವಾಮಿ, ಮುಲ್ಕಿಯ ಮಹೇಶ್ ಭಟ್, ಮೂಡುಬಿದಿರೆ ನಿವಾಸಿ ದಿನೇಶ್ ಎಂಬವರು ವಂಚನೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ.
ಆರೋಪಿಗಳು ಕೆಲಸ ಕೊಡಿಸುತ್ತೇವೆಂದು ಮೊದಲಿಗೆ 8 ಲಕ್ಷ ರೂ., ಬಳಿಕ 32 ಲಕ್ಷ ರೂಪಾಯಿ ಪಡೆದುಕೊಂಡಿದ್ದರು. ಆದರೆ, ಆ ಬಳಿಕ ಉದ್ಯೋಗ ಸಿಗದೆ ವಂಚನೆ ಅರಿತ ಕೃಷ್ಣಗೌಡ, ಮಂಗಳೂರು ಸೈಬರ್ ಮತ್ತು ಆರ್ಥಿಕ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಒಂದೇ ಬೈಕಿನಲ್ಲಿ ಐವರ ಪ್ರಯಾಣ.. ವಿಡಿಯೋ ಶೇರ್ ಮಾಡಿ ಕ್ರಮಕ್ಕೆ ಒತ್ತಾಯಿಸಿದ ಶಾಸಕ ಕಾಮತ್