ಉಳ್ಳಾಲ: ಮಂಗಳೂರು ವಿಶ್ವವಿದ್ಯಾಲಯದ 2020-21ನೇ ಸಾಲಿನ 383.14 ಕೋಟಿ ಮುಂಗಡಪತ್ರಕ್ಕೆ ಮಂಗಳವಾರ ವಿವಿ ಆಡಳಿತ ಸಭಾಂಗಣದಲ್ಲಿ ಉಪಕುಲಪತಿ ಪ್ರೊ. ಪಿ.ಎಸ್.ಯಡಪಡಿತ್ತಾಯ ಅವರ ಅಧ್ಯಕ್ಷತೆಯಲ್ಲಿ ನಡೆದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಪ್ರಸಕ್ತ ಸಾಲಿನಲ್ಲಿ 385.30 ಕೋಟಿ ಖರ್ಚು ಅಂದಾಜಿಸಲಾಗಿದ್ದು, 2.25 ಕೋಟಿ ಕೊರತೆಯಾಗಲಿದೆ. ಮಂಗಳೂರು ವಿವಿ ಹಣಕಾಸು ಅಧಿಕಾರಿ ಪ್ರೊ.ನಾರಾಯಣ ಬದಿಯಡ್ಕ ಅವರು ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಮುಂಗಡಪತ್ರವನ್ನು ಮಂಡಿಸಿದ್ದು, 2019-20ನೇ ಸಾಲಿನಲ್ಲಿ 5.10 ಕೋಟಿ ಕೊರತೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸ್ತುತ ಸಾಲಿನಲ್ಲಿ 2.85 ಕೋಟಿ ಕೊರತೆ ಕಡಿಮೆಯಾಗಲಿದೆ. ಇದನ್ನು ಒಟ್ಟು ಆದಾಯ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಂದ ಬಿಡುಗಡೆಯಾಗುವ ಯೋಜನೇತರ ಮತ್ತು ಯೋಜನೆ ಬಾಬ್ತು ಅನುದಾನಗಳ ನಿರೀಕ್ಷೆಯೊಂದಿಗೆ ಮತ್ತು ಸರ್ಕಾರವು ಹಿಂದಿನ ವರ್ಷಗಳಿಗಿಂತಲೂ ಹೆಚ್ಚು ಅನುದಾನವನ್ನು ಬಿಡುಗಡೆ ಮಾಡಬಹುದೆಂಬ ನಿರೀಕ್ಷೆಯೊಂದಿಗೆ ತಯಾರಿಸಲಾಗಿದೆ ಎಂದರು.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಉಡುಪಿ ಜಿಲ್ಲೆಯ ಬೆಳಪುವಿನಲ್ಲಿ ಸುಧಾರಿತ ಸಂಶೋಧನಾ ಕೇಂದ್ರ, ಅಂತಾರಾಷ್ಟ್ರೀಯ ವಸತಿಗೃಹ, ತರಗತಿ ಕಟ್ಟಡ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಇ-ಆಡಳಿತ, ಮಳೆನೀರು ಕೊಯ್ಲು ಅನುಷ್ಠಾನ, ಕಾಂಪೋಸ್ಟ್ ಗೊಬ್ಬರ ಘಟಕ, ಆಡಿಟೋರಿಯಂ ಆಂತರಿಕ ಕಾರ್ಯ, ಹಿಂದುಳಿದ ಜಾತಿ ಮತ್ತು ವರ್ಗಗಳ ವಿದ್ಯಾರ್ಥಿಗಳಿಗೆ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಸತಿಗೃಹ, ಕಡಗಿನ ಚಿಕ್ಕ ಅಳುವಾರದಲ್ಲಿ ಸ್ನಾತಕೋತ್ತರ ಕ್ಯಾಂಪಸ್ ಸೇರಿದಂತೆ ವಿವಿಧ ಯೋಜನೆಗಳಿಗೆ ಆದ್ಯತೆಯನ್ನು ನೀಡಲಾಗಿದೆ.
ರಾಜ್ಯ ಸರ್ಕಾರದ ಅನುದಾನದಿಂದ ಶೇ.34, ಕಾಲೇಜು ಮತ್ತು ವಿದ್ಯಾರ್ಥಿಗಳಿಂದ ಶುಲ್ಕವಾಗಿ ಶೇ.17, ಋಣ ಮತ್ತು ಠೇವಣಿಗಳಿಂದ ಶೇ.16, ಪರೀಕ್ಷಾ ಶುಲ್ಕದಿಂದ ಶೇ.8, ಯುಜಿಸಿ ಅರಿಯರ್ಸ್‍ನಿಂದ ಶೇ.8, ಪಿಂಚಣಿ ನಿಧಿಯಿಂದ ಶೇ.7, ಇತರ ಆದಾಯ ಶೇ.7 ಮತ್ತು ಪರಿಷ್ಕೃತ ವೇತನದ ಬಾಕಿ ಅನುದಾನ ಶೇ.1ನ್ನು ಆದಾಯವಾಗಿ ನಿರೀಕ್ಷೆ ಮಾಡಲಾಗಿದೆ. ಶೇ.36 ವೇತನ ಮತ್ತು ಭತ್ಯೆ, ಶೇ.17 ಋಣ ಮತ್ತು ಠೇವಣಿಗಳು, ಶೇ.16 ಆಡಳಿತಾತ್ಮಕ ವೆಚ್ಚಗಳು, ಶೇ.9 ನಿವೃತ್ತಿ ಸೌಲಭ್ಯಗಳು ಮತ್ತು ಶೇ.8 ಪರೀಕ್ಷಾ ವೆಚ್ಚವಾಗಿ ಖರ್ಚಾಗಲಿದೆ. ಯುಜಿಸಿ ಅರಿಯರ್ಸ್‍ಗಾಗಿ ಶೇ.7 ವ್ಯಯವಾಗಲಿದೆ. ಹೊಸ ಕಟ್ಟಡಗಳು ಹಾಗೂ ಮೂಲಭೂತ ಸೌಲಭ್ಯಗಳ ಈಡೇರಿಕೆಗಾಗಿ ಸರ್ಕಾರಕ್ಕೆ 132.27 ಕೋಟಿ ಅನುದಾನಕ್ಕೆ ಕೋರಿಕೆ ಸಲ್ಲಿಸಲಾಗಿದೆ.
ಆಯವ್ಯಯದಲ್ಲಿ 72.20 ಕೋಟಿ ಖರ್ಚುಗಳ ಪ್ರಸ್ತಾವನೆ ಮಾಡಿದ್ದು, ಆದರೆ ಸರ್ಕಾರ 2020-21ನೇ ಸಾಲಿನಲ್ಲಿ 25.ಲಕ್ಷ ರೂ. ಮಾತ್ರ ಮಂಜೂರು ಮಾಡಿದೆ ಎಂದು ಪ್ರೊ. ಬಿ. ನಾರಾಯಣ ತಿಳಿಸಿದರು.
ಸಭೆಯಲ್ಲಿ ಕುಲಸಚಿವ ರಾಜು ಮೊಗವೀರ, ಪರೀಕ್ಷಾಂಗ ಕುಲಸಚಿವ ಪ್ರೊ. ಪಿ.ಎಲ್. ಧರ್ಮ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ ಮತ್ತು ಲಾಲಾಜಿ ಮೆಂಡನ್ ಉಪಸ್ಥಿತರಿದ್ದರು.