ಪುತ್ತೂರು (ದಕ್ಷಿಣಕನ್ನಡ): ಲಾಕ್‌ಡೌನ್ ಹಿನ್ನೆಲೆ ನಗರದಲ್ಲಿ ಅನಗತ್ಯ ಓಡಾಟಕ್ಕೆ ತಡೆ ಹಾಕುವ ನಿಟ್ಟಿನಲ್ಲಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಪುತ್ತೂರು ನಗರ ಹಾಗೂ ಸಂಚಾರಿ ಠಾಣೆಯಲ್ಲಿ ಸುಮಾರು 37ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಿದ್ದಾರೆ. ನಗರದಲ್ಲಿ ಅನಗತ್ಯವಾಗಿ ಓಡಾಡುವ ಜನತೆಯನ್ನು ನಿಯಂತ್ರಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ದೇಶದಲ್ಲಿ ಲಾಕ್‌ಡೌನ್ ವ್ಯವಸ್ಥೆ ಜಾರಿಗೊಂಡಿದ್ದು, ದೇಶದ ಜನತೆ ಮನೆಯಲ್ಲಿಯೇ ಇರಬೇಕು ಎಂಬ ಉದ್ದೇಶದ ಮೂಲಕ ಕೊರೊನಾ ಹೆಮ್ಮಾರಿಯನ್ನು ಹಿಮ್ಮೆಟ್ಟಿಸುವ ಕೆಲಸಕ್ಕೆ ಮುನ್ನುಡಿ ಬರೆಯಲಾಗಿದೆ. ದಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಕಂಡುಬಂದ ಹಿನ್ನೆಲೆಯಲ್ಲಿ ಸಂಪೂರ್ಣ ಬಂದ್ ಜಾರಿಗೊಂಡಿದೆ. ಆದರೆ ಜನತೆ ಆಹಾರ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲು ನಿರ್ಬಂಧ ಸಡಿಲಿಕೆ ಮಾಡಿದ ಸಂದರ್ಭದಲ್ಲಿ ದಿನಸಿಗಳಿಗಾಗಿ ಮುಗಿಬಿದ್ದ ಕಾರಣ ಲಾಕ್‌ಡೌನ್ ಉದ್ದೇಶವೇ ತಿರುವು ಮುರುವಾಗಿತ್ತು.
![](https://etvbharatimages.akamaized.net/etvbharat/prod-images/kn-mng-01-lock-down-police-raid-puttur-script-kac10010_04042020131625_0404f_1585986385_896.jpg)
ಈ ಹಿನ್ನಲೆಯಲ್ಲಿ ನಿತ್ಯ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ಮ 12 ಗಂಟೆ ತನಕ ದಿನಸಿ, ಮೆಡಿಕಲ್, ಹಾಲು ಮತ್ತಿತರ ಮೂಲ ಆವಶ್ಯಕತೆಗಳ ಖರೀದಿಗೆ ಅವಕಾಶ ಕಲ್ಪಿಸಲಾಯಿತು. ಈ ಅವಕಾಶವನ್ನು ಬಹಳಷ್ಟು ಮಂದಿ ದುರುಪಯೋಗ ಮಾಡುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ವಾಹನಗಳ ಓಡಾಟವನ್ನು ನಿರ್ಬಂಧಿಸಲಾಯಿತು.
![](https://etvbharatimages.akamaized.net/etvbharat/prod-images/kn-mng-01-lock-down-police-raid-puttur-script-kac10010_04042020131625_0404f_1585986385_509.jpg)
ಆದರೂ ಪುತ್ತೂರು ನಗರ ಹಾಗೂ ಉಪ್ಪಿನಂಗಡಿ ಪೇಟೆಯಲ್ಲಿ ಖಾಸಗಿ ವಾಹನಗಳು ಮತ್ತು ಬೈಕ್ ಸವಾರರ ಅನಗತ್ಯ ಸಂಚಾರ ತಡೆಯುವ ನಿಟ್ಟಿನಲ್ಲಿ ಪೊಲೀಸರು ವಾಹನಗಳನ್ನು ಜಪ್ತಿ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಶುಕ್ರವಾರ ಪುತ್ತೂರು ನಗರ ಠಾಣೆಯಲ್ಲಿ 13 ವಾಹನಗಳನ್ನು ಹಾಗೂ ಸಂಚಾರಿ ಠಾಣೆಯಲ್ಲಿ 8 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಗುರುವಾರ 16 ವಾಹನಗಳನ್ನು ಜಪ್ತಿ ಮಾಡಲಾಗಿದೆ.
![](https://etvbharatimages.akamaized.net/etvbharat/prod-images/kn-mng-01-lock-down-police-raid-puttur-script-kac10010_04042020131625_0404f_1585986385_643.jpg)
ಪೊಲೀಸರ ಈ ಕ್ರಮದಿಂದ ಜನತೆಯ ಅನಗತ್ಯ ಓಡಾಟ ನಿಯಂತ್ರಿತವಾಗುತ್ತಿದೆ. ಪುತ್ತೂರು ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ದರ್ಬೆ ವೃತ್ತ, ಪರ್ಲಡ್ಕ ಹಾಗೂ ಬೊಳುವಾರು ಬಳಿ ಬ್ಯಾರಿಕೇಡ್ ಅಳವಡಿಸಿ ಪೊಲೀಸರು ಜನ ಸಂಚಾರ ನಿಯಂತ್ರಿಸುವ ಕೆಲಸ ನಡೆಸುತ್ತಿದ್ದಾರೆ. ಉಪ್ಪಿನಂಗಡಿಯ ಗಾಂಧಿಪಾರ್ಕ್, ಬಸ್ ನಿಲ್ದಾಣ ಬಳಿ ಪೊಲೀಸರ ಕಾರ್ಯಾಚರಣೆ ನಡೆಯಿತು. ಕಳೆದ ದಿನಗಳಿಗೆ ಹೋಲಿಕೆ ಮಾಡಿದರೆ ಶನಿವಾರ ಜನತೆಯ ಅನಗತ್ಯ ಓಡಾಟವನ್ನು ನಿಯಂತ್ರಿಸುವಲ್ಲಿ ಪೊಲೀಸರು ಭಾಗಶ: ಯಶಸ್ವಿಯಾಗಿದ್ದಾರೆ.
![](https://etvbharatimages.akamaized.net/etvbharat/prod-images/kn-mng-01-lock-down-police-raid-puttur-script-kac10010_04042020131625_0404f_1585986385_338.jpg)
![](https://etvbharatimages.akamaized.net/etvbharat/prod-images/kn-mng-01-lock-down-police-raid-puttur-script-kac10010_04042020131625_0404f_1585986385_26.jpg)
ಗ್ರಾಮೀಣ ಭಾಗದಲ್ಲೂ ಪಡಿತರ ವಿತರಣೆ
ಬಡಜನತೆಗೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ವಿತರಣೆ ಮಾಡುವ ಕಾರ್ಯ ನಡೆಯುತ್ತಿದ್ದು, ಗ್ರಾಮೀಣ ಭಾಗದಲ್ಲೂ ಶನಿವಾರ ಪಡಿತರ ವಿತರಣೆ ಆರಂಭಿಸಲಾಗಿದೆ. ಪ್ರಸ್ತುತ ದಿನಸಿ ಅಂಗಡಿಗಳಿಗಿಂತಲೂ ನ್ಯಾಯಬೆಲೆ ಅಂಗಡಿಗಳಲ್ಲಿ ಜನತೆಯ ಗುಂಪು ಕಂಡುಬರುತ್ತಿದೆ. ಆದರೂ ತಾಲೂಕಿನ ಕೆಲವು ನ್ಯಾಯಬೆಲೆಗಳಲ್ಲಿ ಇನ್ನೂ ಪಡಿತರ ವಿತರಣೆ ನಡೆಯುತ್ತಿಲ್ಲ. ಪಡಿತರ ಅಕ್ಕಿಯ ಪೂರೈಕೆ ಕೊರತೆಯಿಂದ ವಿತರಣೆ ವಿಳಂಬವಾಗಿದೆ.