ಮಂಗಳೂರು : ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆ ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ 300 ಹೆಚ್ಚುವರಿ ಆ್ಯಕ್ಸಿಜನ್ ಯುಕ್ತ ಬೆಡ್‌ಗಳು ಹಾಗೂ ತಾಲೂಕು ಆಸ್ಪತ್ರೆಗಳಿಗೆ 30 ಬೆಡ್‌ಗಳನ್ನು ಒದಗಿಸಲು ಸರ್ಕಾರ ಹಾಗೂ ಆರೋಗ್ಯ ಇಲಾಖೆಯಿಂದ ನಿರ್ಧರಿಸಲಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿರುವ ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರೊಂದಿಗೆ ದ.ಕ. ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ವಿಡಿಯೋ ಕಾನ್ಪರೆನ್ಸ್‌ನಲ್ಲಿ ಚರ್ಚೆ ನಡೆಸಿ ಬಳಿಕ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ವೆನ್ಲಾಕ್ ಆಸ್ಪತ್ರೆಯಲ್ಲಿ ಈಗಾಗಲೇ 150 ಆ್ಯಕ್ಸಿಜನ್ ಯುಕ್ತ ಬೆಡ್‌ಗಳಿದ್ದು, ಹೆಚ್ಚುವರಿ 300 ಬೆಡ್‌ಗಳಿಗೆ ಆ್ಯಕ್ಸಿಜನ್ ಸಂಪರ್ಕ ಜೋಡಿಸುವ ಪ್ರಕ್ರಿಯೆ ಸದ್ಯದಲ್ಲೇ ಪೂರ್ಣಗೊಳ್ಳಲಿದೆ. ಈ ಮೂಲಕ ಆ್ಯಕ್ಸಿಜನ್ ಯುಕ್ತ ಬೆಡ್‌ಗಳ ಸಂಖ್ಯೆ 450ಕ್ಕೇರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಈ ಬಗ್ಗೆ ಕಾರ್ಯ ಪ್ರವೃತ್ತರಾಗಲು ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದು, ತಕ್ಷಣ ಅದರ ಕಾಮಗಾರಿಗಳು ಪೂರ್ಣಗೊಳಿಸಲಾಗುತ್ತದೆ. ಈ ಮೂಲಕ ಮುಂದಿನ ದಿನಗಳಲ್ಲಿ ಕೋವಿಡ್-19 ಆಸ್ಪತ್ರೆಯಲ್ಲಿ ಸೋಂಕಿತರಿಗೆ ಆ್ಯಕ್ಸಿಜನ್ ಯುಕ್ತ ಬೆಡ್‌ಗಳ ಕೊರತೆ ಉದ್ಭವಿಸದಂತೆ ತಡೆಗಟ್ಟಬಹುದಾಗಿದೆ. ಇನ್ನೂ ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿಯೂ 20-30 ಆ್ಯಕ್ಸಿಜನ್ ಯುಕ್ತ ಬೆಡ್‌ಗಳನ್ನು ಒದಗಿಸಲು ಈ ವಿಡಿಯೋ ಕಾನ್ಫರೆನ್ಸ್‌ನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.
ಜಿಲ್ಲೆಯ ಐದು ತಾಲೂಕುಗಳಲ್ಲಿರುವ ಆಸ್ಪತ್ರೆಗಳಲ್ಲಿ ಅಲ್ಲಿನ ಸೋಂಕಿತರಿಗೆ ಆ್ಯಕ್ಸಿಜನ್ ಯುಕ್ತ ಬೆಡ್‌ಗಳನ್ನು ಒದಗಿಸುವ ಮೂಲಕ ನಗರದ ವೆನ್ಲಾಕ್ ಆಸ್ಪತ್ರೆ ಹಾಗೂ ಇತರೆ ಖಾಸಗಿ ಆಸ್ಪತ್ರೆಗಳಲ್ಲಿ ಒತ್ತಡ ಕಡಿಮೆ ಆಗಲಿದೆ ಎಂದು ಹೇಳಿದರು. ವಿಡಿಯೋ ಕಾನ್ಫರೆನ್ಸ್‌ನಲ್ಲಿ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ದ.ಕ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ ಜೆ ರೂಪಾ, ಮಂಗಳೂರು ಮನಪಾ ಉಪ ಆಯುಕ್ತ ಸಂತೋಷ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ವೈದ್ಯಕೀಯ ಅಧಿಕಾರಿ, ಮತ್ತಿತರರು ಉಪಸ್ಥಿತರಿದ್ದರು.