ಮಂಗಳೂರು: ಕೋವಿಡ್ ಲಾಕ್ಡೌನ್ನಿಂದ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ತಾಯ್ನಾಡಿಗೆ ಕರೆತರುವ ಕಾರ್ಯ ಮತ್ತೆ ಮುಂದುವರೆದಿದ್ದು, ಮಂಗಳವಾರ ದಮಾಮ್ ಹಾಗೂ ಮಸ್ಕತ್‌ನಿಂದ ಮತ್ತೆರಡು ವಿಮಾನಗಳು ಮಂಗಳೂರಿಗೆ ಆಗಮಿಸಿದೆ. ಇದರಲ್ಲಿ ಒಟ್ಟು 285 ಪ್ರಯಾಣಿಕರು ಆಗಮಿಸಿದ್ದಾರೆ.
ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್ ಕಾರ್ಯಾಚರಣೆಯಲ್ಲಿ ಮಸ್ಕತ್‌ನಿಂದ ಬೆಂಗಳೂರು ಮೂಲಕ ಮಂಗಳೂರಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಶೇಷ ವಿಮಾನ ಮಂಗಳವಾರ ಸಂಜೆ ಆಗಮಿಸಿದೆ. ಈ ವಿಮಾನದಲ್ಲಿ ಒಟ್ಟು 178 ಮಂದಿ ಪ್ರಯಾಣಿಕರಿದ್ದು, 110 ಮಂದಿ ಮಂಗಳೂರಿಗೆ ಆಗಮಿಸಿದ್ದಾರೆ. ಇವರಲ್ಲಿ ಮಂಗಳೂರಿನ 72, ಉಡುಪಿಯ 34 ಹಾಗೂ ಉತ್ತರ ಕನ್ನಡದ 4 ಮಂದಿ ಸೇರಿದ್ದಾರೆ.
ಅದೇ ರೀತಿ ದಮಾಮ್‌ನಿಂದ ಮಂಗಳೂರಿಗೆ ಹೊರಟ 175 ಮಂದಿ ಅನಿವಾಸಿ ಕನ್ನಡಿಗರನ್ನು ಹೊತ್ತ ಚಾರ್ಟರ್ಡ್ ವಿಮಾನ ಮಧ್ಯಾಹ್ನ ಹೊತ್ತಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ. ಈ ಎರಡೂ ವಿಮಾನಗಳಲ್ಲಿ ಬಂದಿರುವ ಎಲ್ಲರೂ ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.