ಮಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಲಿಗೆ, ಕಳ್ಳತನ ನಡೆಸುತ್ತಿದ್ದ 9 ಮಂದಿ ದರೋಡೆಕೋರರನ್ನು ಬಂಧಿಸಿದ್ದ ಮೂಡುಬಿದಿರೆ ಪೊಲೀಸರು ಇದೀಗ ಮತ್ತೆ 6 ಮಂದಿಯನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಮಂಗಳೂರಿನ ಕೆ.ಸಿ ರೋಡ್ನ ಮುಹಮ್ಮದ್ ಝುಬೈರ್, ಬೆಳ್ತಂಗಡಿಯ ಇಬ್ರಾಹಿಂ ಲತೀಫ್, ಮೂಡಬಿದಿರೆಯ ರಾಕೇಶ್, ಅರ್ಜುನ್, ಉಪ್ಪಿನಂಗಡಿಯ ಮೋಹನ್ ಮತ್ತು ಕೋಣಾಜೆ ಬೋಳಿಯಾರ್ನ ಮನ್ಸೂರ್ ಬಂಧಿತರು. ಇವರ ವಿರುದ್ಧ ವಿವಿಧ ಠಾಣೆಗಳಲ್ಲಿ ದನ ಕಳ್ಳತನ, ಕಳ್ಳತನ, ಸುಲಿಗೆ ಸೇರಿದಂತೆ 28 ಪ್ರಕರಣಗಳು ದಾಖಲಾಗಿವೆ. ಇವರಿಂದ ಒಟ್ಟು 41.82 ಲಕ್ಷ ರೂ. ಮೌಲ್ಯದ ಮೂರು ಕಾರು, 8 ಮೊಬೈಲ್ ಫೋನ್, 54 ಗ್ರಾಂ ಚಿನ್ನ, 3.5 ಕೆಜಿ ಬೆಳ್ಳಿ ವಸ್ತುಗಳು, 2 ತಲವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್, ಮಾರ್ಚ್ 27ರಿಂದ ಏ. 1ರವರೆಗೆ ಮೂಡುಬಿದಿರೆಯಲ್ಲಿ ನಡೆದ ಸರಣಿ ದರೋಡೆ, ಕಳ್ಳತನ ಪ್ರಕರಣ ಬೆನ್ನತ್ತಿದ್ದಾಗ ಒಂಭತ್ತು ಮಂದಿ ದರೋಡೆಕೋರರನ್ನು ಬಂಧಿಸಲು ಸಾಧ್ಯವಾಗಿತ್ತು. ಇವರು 4 ದೊಡ್ಡ ಗ್ಯಾಂಗ್ ಮೂಲಕ ದರೋಡೆ ನಡೆಸುತ್ತಿರುವುದು ತಿಳಿದು ಬಂದಿತ್ತು. ಇದೀಗ ಮತ್ತೆ ಆರು ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಮೂವರು ಪ್ರಮುಖ ಆರೋಪಿಗಳಾಗಿದ್ದಾರೆ ಎಂದರು.
ಫಳ್ನೀರ್ ಶೂಟೌಟ್ನಲ್ಲಿ ಇವರು ಕದ್ದಿದ್ದ ಪಿಸ್ತೂಲ್ ಬಳಕೆ!
ಮಂಗಳೂರಿನ ಫಳ್ನೀರ್ನಲ್ಲಿ ಕೆಲ ತಿಂಗಳ ಹಿಂದೆ ರೆಸ್ಟೋರೆಂಟ್ನಲ್ಲಿ ಸಮೋಸ ಬಿಸಿ ಇರಲಿಲ್ಲ ಎಂದು ನಡೆದ ವಾಗ್ವಾದದಲ್ಲಿ ವ್ಯಕ್ತಿಯೊಬ್ಬ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದ. ಇದರಲ್ಲಿ ಬಳಕೆಯಾದ ಪಿಸ್ತೂಲನ್ನು ಹಾಸನದ ಹರೆಹಳ್ಳಿಯ ಮನೆ ದರೋಡೆ ವೇಳೆ ಕಳ್ಳತನ ಮಾಡಲಾಗಿತ್ತು. ಇಂದು ಬಂಧಿತರಾದ ದರೋಡೆಕೋರರಲ್ಲಿ ಓರ್ವನಾದ ಮನ್ಸೂರ್ ಬೋಳಿಯಾರ್ ಇದನ್ನು ಆ ವ್ಯಕ್ತಿಗೆ ಮಾರಾಟ ಮಾಡಿದ್ದ. ಗುಂಡು ಹಾರಿಸಿದ ಪ್ರಕರಣದಲ್ಲಿ ಆರೋಪಿಯನ್ನು ಈ ಮೊದಲೇ ಬಂಧಿಸಲಾಗಿತ್ತು.