ಮಂಗಳೂರು: ನೂತನ 100 ರೂ. ನೋಟು ಹೆಚ್ಚಿನ ಸಂಖ್ಯೆಯಲ್ಲಿ ಚಲಾವಣೆಯಾಗಬೇಕೆಂಬ ಉದ್ದೇಶದಿಂದ ಹಳೆಯ 100 ರೂ. ನೋಟನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್ಗೆ ಸ್ಥಗಿತಗೊಳಿಸುತ್ತದೆ ಎಂದು ಆರ್ಬಿಐ ಮಹಾಪ್ರಬಂಧಕ ಬಿ.ಎಂ. ಮಹೇಶ್ ತಿಳಿಸಿದರು.
ನಗರದ ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಬ್ಯಾಂಕಿಂಗ್ ಭದ್ರತೆ ಹಾಗೂ ನಗದು ನಿರ್ವಹಣಾ ಸಭೆಯಲ್ಲಿ ಮಾತನಾಡಿದ ಅವರು, ಹಳೆಯ ಸೀರೀಸ್ 100 ರೂ. ನೋಟನ್ನು ಹೋಲುವ ಖೋಟಾ ನೋಟುಗಳು ಹೆಚ್ಚಾಗಿರುವುದರಿಂದ ಈ ನೋಟನ್ನು ಮಾರ್ಚ್ ಅಂತ್ಯದ ವೇಳೆಗೆ ಹಿಂಪಡೆಯಲಾಗುತ್ತದೆ ಎಂದು ಹೇಳಿದರು. ಹಳೆಯ ಸೀರೀಸ್ನ 100 ರೂ. ನೋಟನ್ನು ಹಿಂಪಡೆಯುವ ಉದ್ದೇಶದಿಂದ ಆರ್ಬಿಐ ಕಳೆದ ಆರು ತಿಂಗಳಿನಿಂದ ಈ ನೋಟನ್ನು ಮುದ್ರಣ ಮಾಡುತ್ತಿಲ್ಲ. ಹಳೆಯ ನೋಟುಗಳನ್ನು ಹಂತಹಂತವಾಗಿ ಹಿಂಪಡೆಯಲಾಗುತ್ತಿದೆ ಎಂದು ಹೇಳಿದರು.
ಈ ಸುದ್ದಿಯನ್ನೂ ಓದಿ: ಶಿವಮೊಗ್ಗಕ್ಕೆ ತೆರಳಿ ಪರಿಶೀಲನೆ ನಡೆಸುವಂತೆ ಸಚಿವ ನಿರಾಣಿಗೆ ಸಿಎಂ ಸೂಚನೆ
ನೋಟು ವಾಪಾಸಾತಿ ಎಂದರೆ ಜನತೆ ಭಯ ಪಡುವ ಅಗತ್ಯವಿಲ್ಲ. ಇದು ನೋಟು ಅಮಾನ್ಯೀಕರಣವಲ್ಲ, ಹೊಸ ಸೀರೀಸ್ನ 100 ರೂ. ಮುಖಬೆಲೆಯ ನೋಟುಗಳನ್ನು ಮಾತ್ರ ಚಲಾವಣೆಯಲ್ಲಿ ಇರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಬ್ಯಾಂಕ್ ಸಿಬ್ಬಂದಿಯೂ 100 ರೂ. ನೋಟನ್ನು ಇರಿಸಿಕೊಳ್ಳದೇ ಕರೆನ್ಸಿ ಚೆಸ್ಟ್ಗೆ ಕಳುಹಿಸಬೇಕು ಎಂದು ವಿನಂತಿಸಿಕೊಂಡರು.