ಚಿತ್ರದುರ್ಗ: ಸಿಎಂ ಮುಂಜಾನೆ ಒಂದು ಹೇಳ್ತಾರೆ, ಸಾಯಂಕಾಲ ಒಂದು ಹೇಳಿಕೆ ನೀಡುತ್ತಾರೆ. ಅದನ್ನೆಲ್ಲ ನೋಡಿದ್ರೆ ಸಿಎಂ ಬಿಎಸ್‌ವೈ ರಾಜಕೀಯ ನಿವೃತ್ತಿ ತಗೊಳೋದು ಒಳ್ಳೆಯದು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಿಎಂ ವಿರುದ್ಧ ಗರಂ ಆಗಿದ್ದಾರೆ.
ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿಯಲ್ಲಿ ಪಂಚಮಸಾಲಿ ಸಮುದಾಯದ ಶ್ರೀಗಳ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಯತ್ನಾಳ, ಇಂದು ಸಿಎಂ ರಾಜಕೀಯವಾಗಿ ಕೆಲಸ ಮಾಡಿ ದಣಿದಿದ್ದಾರೆ. ಹೀಗಾಗಿ ಕಾವೇರಿ ಸಿವಾಸದಲ್ಲಿ ಅವರ ಮಗ ವಿಜಯೇಂದ್ರ ಹಾಗೂ ಕುಟುಂಬಸ್ಥರು ಅಧಿಕಾರ ಚಲಾಯಿಸುತ್ತಿದ್ದಾರೆ. ಕುಟುಂಬ ರಾಜಕಾರಣಕ್ಕೆ ಮುಕ್ತಿ ನೀಡುವುದು ಪ್ರಧಾನಿ ಕನಸಾಗಿದೆ. ಹೀಗಾಗಿ ಸಿಎಂ ಬಿಎಸ್‌ವೈ ನಿವೃತ್ತಿ ಪಡೆಯುವುದು ಒಳ್ಳೆಯದು ಎಂದು ಯತ್ನಾಳ ಹೇಳಿದ್ದಾರೆ.
ಫೆ.10 ರಂದು ಪಂಚಮಸಾಲಿ ಸಮುದಾಯದ ಎಲ್ಲ ಮಾಜಿ ಹಾಲಿ ಶಾಸಕ, ಸಂಸದ ಹಾಗೂ ಮುಖಂಡರ ಜೊತೆಗೆ ಸಭೆ ನಡೆಸಿ, ಬಳಿಕ ಬೆಂಗಳೂರಿನಲ್ಲಿ ಪಂಚಮಸಾಲಿ ಸಮುದಾಯದ ಶಕ್ತಿ ಪ್ರದರ್ಶನ ಮಾಡಲಾಗುತ್ತದೆ. ಪಂಚಮಸಾಲಿ ಸಮುದಾಯದ ಅಧ್ಯಯನಕ್ಕಾಗಿ ಹಿಂದುಳಿದ ಆಯೋಗಕ್ಕೆ ಸಿಎಂ ಸೂಚನೆ ನೀಡಿದ್ದಾರೆಂದು ಸಚಿವ ಸಿಸಿ ಪಾಟೀಲ ಮೂಲಕ ಗೊತ್ತಾಗಿದೆ ಎಂದರು.
ಸಿಎಂ ಬೆಳಿಗ್ಗೆ ಸದನಸಲ್ಲಿ ಈ ಆದೇಶ ನೀಡಿದ್ದರೆ ಆಕ್ರೋಶ ಭುಗಿಲೇಳುತ್ತಿರಲಿಲ್ಲ. ವಯಸ್ಸಿನ ಕಾರಣದಿಂದ ಮುಖ್ಯಮಂತ್ರಿ ಯಡಿಯೂರಪ್ಪ ಗೊಂದಲ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗಳೇ ರಾಜ್ಯಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತಿವೆ. ಇತ್ತ ಸಿಎಂ ತಾವೂ ಉಳಿಯಬೇಕು, ತಮ್ಮ ಕುಟುಂಬವನ್ನು ಉದ್ದಾರ ಮಾಡ್ಬೇಕು ಅಂದುಕೊಂಡಿದ್ದಾರೆ. ಅವರ ಕುಟುಂಬದಿಂದ ಕರ್ನಾಟಕ ಮುಕ್ತಿ ಪಡೆಯಬೇಕಿದೆ. ಹೈಕಮಾಂಡ್ ಕೂಡ ನಮ್ಮ ಗೌರವಯುತ ಬೇಡಿಕೆ ಈಡೇರಿಸಲು ಸಜ್ಜಾಗಿದೆ ಎಂದು ಬಿಎಸ್‌ವೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ಎರಡು ವರ್ಷಗಳ ಕಾಲ ಬಿಎಸ್‌ವೈ ಸಿಎಂ ಆಗಿರುತ್ತಾರೆ ಎಂಬ ಸಚಿವ ನಿರಾಣಿ ಹೇಳಿಕೆಗೆ ಸಿಡಿಮಿಡಿಗೊಂಡ ವಿಜಯಪುರ ಶಾಸಕ , ಕಳೆದ ಆರು ತಿಂಗಳ ಹಿಂದೆ ಅವರೇ ಸಿಎಂ ವಿರುದ್ಧ ಷಡ್ಯಂತರ ಮಾಡಿದ್ರು, ಮಂತ್ರಿ ಸ್ಥಾನ ಬಂದ ಮೇಲೆ ಈ ರೀತಿ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನು ಓದಿಯುಗಾದಿ ಒಳಗೆ ಸಿಎಂ ಬದಲಾಗ್ತಾರೆ, ಉತ್ತರ ಕರ್ನಾಟಕದವರಿಗೆ ಪಟ್ಟ : ಶಾಸಕ ಯತ್ನಾಳ