ಚಿತ್ರದುರ್ಗ: ಬಾಗಲಕೋಟೆಯಲ್ಲಿ ನಾಪತ್ತೆಯಾದ ಗಂಡನನ್ನ ಹುಡುಕಲು ಮಕ್ಕಳು ಮತ್ತು ಆಕೆಯ ಗೆಳೆಯನೊಂದಿಗೆ ಮಹಿಳೆಯೊಬ್ಬಳು ಚಿತ್ರದುರ್ಗಕ್ಕೆ ಬಂದಿದ್ದಳು. ಆಕೆಯ ಜೊತೆ ಬಂದಿದ್ದ ಗೆಳೆಯನೇ ಮಹಿಳೆಯನ್ನ ಕೊಲೆಮಾಡಿ ತಾನೂ ನೇಣಿಗೆ ಶರಣಾಗಿದ್ದಾನೆ.
ಮೃತರನ್ನ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಚಿಕ್ಕೂರು ನಿವಾಸಿಯಾದ ಸುಮಂಗಲ ಹಾಗೂ ಅದೇ ಗ್ರಾಮದ ಯುವಕ ಪವನ್ ಎಂದು ಗುರುತಿಸಲಾಗಿದೆ.
ಸುಮಂಗಲ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನಿಂದ ನಾಪತ್ತೆಯಾಗಿದ್ದ ಗಂಡ ಕೃಷ್ಣಪ್ಪಗೌಡನನ್ನ ಹುಡುಕಿಕೊಂಡು ತನ್ನ ಗೆಳೆಯ ಪವನ್ ಹಾಗು ಮಕ್ಕಳ ಜೊತೆ ಚಿತ್ರದುರ್ಗದ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದರು. ಆದ್ರೆ ಇಬ್ಬರ ನಡುವೆ ಏನಾಯ್ತೋ ಗೊತ್ತಿಲ್ಲ, ಜೊತೆಗೆ ಬಂದಿದ್ದ ಪವನ್ ಎಂಬಾತನೇ ಸುಮಂಗಲ ಕುತ್ತಿಗೆಗೆ ವೇಲು ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ನಂತರ ತಾನೂ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಕ್ಕಳು ಅಳುತ್ತಿರುವ ಶಬ್ದ ಕೇಳಿ ರೂಂ ಬಳಿ ಬಂದು ನೋಡಿದ ಲಾಡ್ಜ್ ಮ್ಯಾನೇಜರ್ ಕೂಡಲೇ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಫೈಜುಲ್ಲಾ, ಘಟನೆ ವೇಳೆ ಸ್ಥಳದಲ್ಲೇ ಇದ್ದ ಆಕೆಯ ಮಗನ ಬಳಿ ಹೇಳಿಕೆ ಪಡೆದುಕೊಂಡು, ಸ್ಥಳ ಮಹಜರು ಮಾಡಿದ ನಂತರ ಮೃತದೇಹಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.
ಈ ನಡುವೆ ತಾಯಿಯನ್ನು ಕಳೆದುಕೊಂಡು ಅನಾಥರಾಗಿದ್ದ ಮಕ್ಕಳನ್ನು ಬಾಲಮಂದಿರದಲ್ಲಿ ಇರಿಸಿದ್ದು, ವಾರಸುದಾರರು ಬಂದ ನಂತರ ಮೃತದೇಹ ಮತ್ತು ಮಕ್ಕಳನ್ನು ಅವರಿಗೆ ಒಪ್ಪಿಸಲಾಗುವುದು ಎಂದು ಚಿತ್ರದುರ್ಗ ಜಿಲ್ಲಾ ಎಸ್ಪಿ ಡಾ.ಕೆ ಅರುಣ್ ಮಾಹಿತಿ ನೀಡಿದ್ದಾರೆ. ಮಹಿಳೆಯ ಕೊಲೆ ಮತ್ತು ಯುವಕನ ಅಸಹಜ ಸಾವಿನ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ನಗರ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.