ಚಿತ್ರದುರ್ಗ: ಕೊರೊನಾ ಹರಡುವ ಭೀತಿಯಿಂದ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕುವ ಪರಿಸ್ಥಿತಿಯಿದೆ. ಆದರೆ ಜಿಲ್ಲೆಯ ಆಂಧ್ರದ ಗಡಿ ಗ್ರಾಮಗಳ ಮಹಿಳೆಯರು, ಮಕ್ಕಳು ಕುಡಿಯುವ ನೀರಿಗಾಗಿ ಕಿಲೋ ಮೀಟರ್ಗಟ್ಟಲೇ ನಡೆದು ಹೋಗಲೇಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯಾದ್ಯಂತ ಎರಡ್ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಇದು ಈರುಳ್ಳಿ ಬೆಳಗಾರರಿಗೆ ಶಾಪವಾದರೆ, ಶೇಂಗಾ, ತೊಗರಿ, ಜೋಳ ಬಿತ್ತುವ ರೈತರಿಗೆ ವರದಾನವಾಗಿದೆ. ಆದರೆ, ಹಿರಿಯೂರು ತಾಲೂಕು ಧರ್ಮಪುರ ಹೋಬಳಿಯ ಕೋಡಿಹಳ್ಳಿ ಗೊಲ್ಲರಹಟ್ಟಿ, ಲಂಬಾಣಿ ತಾಂಡ, ಜೆ.ಜೆ.ಕಾಲೋನಿಯಲ್ಲಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೇವಲ ಜನರು ಮಾತ್ರವಲ್ಲದೇ ಮೂಕ ಪ್ರಾಣಿಗಳು ನೀರಿಲ್ಲದೇ ಪರದಾಡುತ್ತಿವೆ.
ಹೀಗಾಗಿ, ಊರಿನಿಂದ ಹೊರಗಿರುವ ಬಾವಿಗೆ ಕಾಲ್ನಡಿಗೆಯಲ್ಲೇ ತೆರಳಿ ನೀರು ತರಬೇಕಾದ ಪರಿಸ್ಥಿತಿಯಿದೆ. ಕೊರೊನಾ ನಡುವೆಯೂ ಹತ್ತಾರು ಮಳೆಯರು, ಮಕ್ಕಳು ಒಟ್ಟಿಗೆ ಹೋಗಿ ನೀರು ತರುತ್ತಿದ್ದಾರೆ. ಇದರಿಂದ ಸೋಂಕು ಹರಡುವ ಭೀತಿಯೂ ಹೆಚ್ಚಿದೆ. ಇಲ್ಲಿನ ಜನತೆ ಹಲವು ದಿನಗಳಿಂದ ನೀರಿನ ಸಮಸ್ಯೆ ಎದುರಿಸುತ್ತಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದು, ಇನ್ನಾದ್ರೂ ಎಚ್ಚೆತ್ತು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ನೀಡುವ ಕಾರ್ಯಕ್ಕೆ ಮುಂದಾಗಬೇಕಿದೆ.
ಓದಿ: ಜುಲೈ 3ನೇ ವಾರದಲ್ಲಿ SSLC ಪರೀಕ್ಷೆ ಸಾಧ್ಯತೆ: ಹೀಗಿರಲಿದೆ ನೋಡಿ ಪರೀಕ್ಷಾ ವಿಧಾನ..