ಚಿತ್ರದುರ್ಗ : ಕೋಟೆನಾಡು ಚಿತ್ರದುರ್ಗದ ಏಕೈಕ ಜಲಾಶಯ ವಿವಿ ಸಾಗರದ ಒಡಲು ಸಂಪೂರ್ಣವಾಗಿ ಬರಿದಾಗಿದೆ. ಮಳೆ ಇಲ್ಲದೆ ಇಷ್ಟೊತ್ತಿಗೆ ತಕ್ಕ ಮಟ್ಟಿಗೆ ಹರಿದು ಬರಬೇಕಾಗಿದ್ದನೀರಿನ ಮಟ್ಟ ಸಂಪೂರ್ಣ ಕುಸಿತ ಕಂಡಿದೆ. ಇದರ ಮಧ್ಯೆ ಜಿಲ್ಲಾಡಳಿತ ಕುಡಿಯುವ ನೀರು ಪೂರೈಸಲು ಅಳಿದುಳಿದ ನೀರನ್ನು ನಗರ ಪ್ರದೇಶಗಳಿಗೆ ಪಂಪ್ ಮಾಡುತ್ತಿದ್ದು, ಜಲಾಶಯಕ್ಕೆ ಧಕ್ಕೆ ಉಂಟಾಗುತ್ತದೆಂದು ರೈತರು ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ವಿವಿ ಸಾಗರ ಜಲಾಶಯ ನೀರಿಲ್ಲದೆ ಬಿಕೋ ಎನ್ನುತ್ತಿದೆ. ಹಿರಿಯೂರು ತಾಲ್ಲೂಕಿನ ರೈತರ ಜೀವನಾಡಿಯಾದ ಈ ಜಲಾಶಯದಿಂದ ಹಿರಿಯೂರು, ಚಿತ್ರದುರ್ಗ ಹಾಗೂ ಚಳ್ಳಕೆರೆ ನಗರಗಳ ಜನರಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ಸತತ ಬರಗಾಲದಿಂದಾಗಿ ವಿವಿ ಸಾಗರದ ನೀರಿನ ಸಂಗ್ರಹ ಅಪಾಯದ ಮಟ್ಟ ತಲುಪಿದೆ, ಹೀಗಿದ್ದರೂ ಕನಿಷ್ಠ ಮಟ್ಟದ ನೀರನ್ನೂ ಕೂಡ ವಿವಿ ಸಾಗರದ ಒಡಲಿನಿಂದ ಬಸಿದು ನಗರಗಳಿಗೆ ನೀರು ಪೂರೈಕೆ ಮಾಡುತ್ತಿರುವುದರಿಂದ ಅಣೆಕಟ್ಟೆಗೆ ಅಪಾಯ ಎದುರಾಗುವ ಸಂಭವ ಹೆಚ್ಚಾಗಿದೆ. ಹೀಗಾಗಿ ವಿವಿ ಸಾಗರ ಉಳಿಸುವ ನಿಟ್ಟಿನಲ್ಲಿ ಸತತ ಹೋರಾಟ ನಡೆಸುತ್ತಿರುವ ವಿವಿ ಸಾಗರ ಸಂರಕ್ಷಣಾ ಸಮಿತಿ ಕಾರ್ಯಕರ್ತರು ವಿವಿಧ ಸಂಘ ಸಂಸ್ಥೆಗಳು, ರೈತಪರ ಸಂಘಟನೆಗಳು, ರಾಜಕೀಯ ಮುಖಂಡರ ನೇತೃತ್ವದಲ್ಲಿ ಜಲಾಶಯಕ್ಕೆ ಮುತ್ತಿಗೆ ಹಾಕಿ, ಅಣೆಕಟ್ಟೆಯಿಂದ ಹೊರಹೋಗುವ ನೀರಿನ ಗೇಟ್ಗಳನ್ನ ಬಂದ್ ಮಾಡುವ ಮೂಲಕ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದು, ಪರ್ಯಾಯ ಮಾರ್ಗದ ಮೂಲಕ ವಿವಿ ಸಾಗರಕ್ಕೆ ನೀರು ತುಂಬಿಸುವಂತೆ ಆಗ್ರಹಿಸಿದ್ದಾರೆ.
ಹಿರಿಯೂರು ತಾಲ್ಲೂಕಿನ ಜನರು ಹಾಗೂ ರೈತರು ನಡೆಸುತ್ತಿರುವ ಹೋರಾಟಕ್ಕೆ ಸ್ಥಳೀಯ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಮೈಸೂರು ಅರಸರ ಕಾಲದಲ್ಲಿ ನಿರ್ಮಾಣವಾದ ಹಿರಿಯೂರು ತಾಲ್ಲೂಕಿನ ಜನರ ಜೀವನಾಡಿಯಾದ ವಿವಿ ಸಾಗರ ಅಪಾಯದ ಮಟ್ಟ ತಲುಪಿರೋದು ನಮ್ಮ ದುರದೃಷ್ಟ, ಹೀಗಾಗಿ ಜನರ ಹೋರಾಟಕ್ಕೆ ನಾನು ಬೆಂಬಲವಾಗಿ ನಿಂತಿದ್ದು, ಕಳೆದ ಹತ್ತು ವರ್ಷಗಳಿಂದ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಚುರುಕುಗೊಳಿಸಿ ವಿವಿ ಸಾಗರ ತುಂಬಿಸುವ ಕೆಲಸ ಮಾಡದಿದ್ದರೆ, ಮತ್ತೆ ಅಣೆಕಟ್ಟೆಗೆ ಇಳಿದು ಹೋರಾಟ ಮಾಡುವುದು ಮಾತ್ರವಲ್ಲ, ಅಗತ್ಯ ಬಿದ್ದರೆ ಗಲಾಟೆ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.