ಚಿತ್ರದುರ್ಗ: ಕೋಟೆನಾಡಿಗೆ ಹೊಂದಿಕೊಂಡಿರುವ ರಾಷ್ಟೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪ್ರಮುಖವಾಗಿ ಹೆದ್ದಾರಿ ಬದಿ ಹೆಚ್ಚುವರಿ ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.
ಪ್ರತಿನಿತ್ಯ ಹೆದ್ದಾರಿಗಳಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಆದ್ರೆ ರಸ್ತೆ ಬದಿ ಹೆಚ್ಚಿನ ಸಂಖ್ಯೆಯಲ್ಲಿ ಲಾರಿ, ಕಾರು ಸೇರಿದಂತೆ ಇತರೆ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದೆ ಹೆದ್ದಾರಿಗಳಲ್ಲಿ ವಾಹನ ನಿಲ್ಲಿಸುತ್ತಿರುವುದರಿಂದ ಹಿಂಬದಿಯಲ್ಲಿ ವೇಗವಾಗಿ ಬಂದ ವಾಹನಗಳು ನಿಂತ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಿದ್ದು, ಈ ಹಿನ್ನೆಲೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಸೂಚನಾ ಫಲಕಗಳ ಕೊರತೆ:
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹೆಚ್ಚು ಅಪಘಾತಗಳು ಸಂಭವಿಸುವ ಸ್ಥಳಗಳಲ್ಲಿ ಯಾವುದೇ ಸೂಚನಾ ಫಲಕಗಳನ್ನು ಅಳವಡಿಕೆ ಮಾಡದಿರುವುದರಿಂದ ರಸ್ತೆ ಅಪಘಾತಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಜಿಲ್ಲೆಗೆ ಹೊಂದಿಕೊಂಡಿರುವ ಹೆದ್ದಾರಿಗಳಲ್ಲಿ ದಿನದಿಂದ ದಿನಕ್ಕೆ ರಸ್ತೆ ಬದಿಯಲ್ಲಿ ಹೆಚ್ಚಾಗಿ ಪಾರ್ಕಿಂಗ್ ಮಾಡಲಾಗುತ್ತಿದೆ. ಕಳೆದ ತಿಂಗಳು ಜಿಲ್ಲೆಯ ಕ್ಯಾದಿಗ್ಗೆರೆ, ಟಿ. ನೂಲೇನೂರು ಗೇಟ್, ಹಿರಿಯೂರು, ಬಿ.ಜಿ ಕೆರೆ ಸೇರಿದಂತೆ ಚಳ್ಳಕೆರೆ ಹಾಗೂ ಚಿತ್ರದುರ್ಗ ತಾಲೂಕಿನ ಹಲವು ಕಡೆಗಳಲ್ಲಿ ರಸ್ತೆ ಬದಿಯಲ್ಲಿ ನಿಂತ ವಾಹನಕ್ಕೆ ಹಿಂಬದಿಯಿಂದ ಬಂದ ವಾಹನ ಡಿಕ್ಕಿಯಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ರಸ್ತೆ ಬದಿಯಲ್ಲಿ ವಾಹನ ಪಾರ್ಕಿಂಗ್ ಮಾಡುವುದಕ್ಕೆ ಕಡಿವಾಣ ಹಾಕುವಂತೆ ಜನರು ಆಗ್ರಹಿಸಿದ್ದಾರೆ.
ಇನ್ನು ಈ ಕುರಿತಾಗಿ ಚಿತ್ರದುರ್ಗ ಎಸ್ಪಿ ರಾಧಿಕಾ ಅವರನ್ನು ಕೇಳಿದ್ರೆ, ವೇಗವಾಗಿ ಬಂದ ವಾಹನಗಳಿಂದಲೇ ಅಪಘಾತಗಳು ಹೆಚ್ಚುತ್ತಿವೆ. ಇತ್ತ ರಸ್ತೆ ಬದಿಯಲ್ಲಿ ಪಾರ್ಕಿಂಗ್ ತಡೆಗೆ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳೊಂದಿಗೆ ಸಭೆ ಕೂಡ ಮಾಡಿದ್ದೇವೆ. ಅಪಘಾತಗಳ ತಡೆಗೆ ಮತ್ತಷ್ಟು ಭದ್ರತಾ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಹೇಳಿದ್ದಾರೆ.