ಚಿತ್ರದುರ್ಗ: ಕೊರೊನಾ ಸಂಕಷ್ಟದಲ್ಲಿರುವ ಜನರಿಗೆ ನೆರವಾಗಲು ಹಾಗೂ ಸಾಂಪ್ರದಾಯಿಕ ಉದ್ಯೋಗಗಳಿಗೆ ಉತ್ತೇಜನ ನೀಡಲು ಪ್ರತಿ ತಾಲೂಕಿನ 50 ಸಾವಿರ ಜನರಿಗೆ ತರಬೇತಿ ನೀಡಲಾಗುವುದು ಎಂದು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಕೌಟಿಲ್ಯ ತಿಳಿಸಿದರು.
ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ಕೋವಿಡ್ ವೈರಾಣು ಹಾವಳಿಯಿಂದ ಸಾಂಪ್ರದಾಯಿಕ ಉದ್ಯೋಗಗಳು ಕ್ಷೀಣಿಸುತ್ತಿವೆ. ಯುವಕರು ಉದ್ಯೋಗಕ್ಕಾಗಿ ಪರದಾಡುವಂತಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ದೇವರಾಜ ಅರಸು ಹಿಂದುಳಿದ ಕಲ್ಯಾಣ ಅಭಿವೃದ್ಧಿ ನಿಗಮದಿಂದ ಯುವಕರಿಗೆ ಉದ್ಯೋಗ ತರಬೇತಿ ನೀಡಲು ಮುಂದಾಗಿದೆ. ರಾಜ್ಯದಲ್ಲಿ 1.25 ಲಕ್ಷ ಜನರಿಗೆ ಕೌಶಲ್ಯಾಧಾರಿತ ತರಬೇತಿ ನೀಡಿ, ಚೈತನ್ಯ ಯೋಜನೆಯಡಿ ಹಾಗೂ ನೇರ ಸಾಲದ ಮೂಲಕ ಯುವ ಸಮೂಹಕ್ಕೆ ಉದ್ಯೋಗ ಕಲ್ಪಿಸಲಾಗುವುದು ಎಂದು ತಿಳಿಸಿದರು.
ದೇವರಾಜ ಅರಸು ಅಭಿವೃದ್ಧಿ ನಿಗಮದ ಮೂಲಕ ಸಣ್ಣ ಹಿಡುವಳಿದಾರರಿಗೆ ಕೊಳವೆಬಾವಿ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲ, ಹಾಗೂ ಕೃಷಿಯಾಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ಅಭಿವೃದ್ಧಿ ನಿಗಮ ಮಂಡಳಿ ಯೋಜನೆ ರೂಪಿಸಲಾಗಿದೆ. ಈ ಮೂಲಕ ಸ್ವಾವಲಂಬಿ ಭಾರತ ಕಟ್ಟಲು ಸಹಕಾರಿಯಾಗಿದೆ ಎಂದರು. ಪ್ರಸ್ತಕ ಸಾಲಿನಲ್ಲಿ ಕೊರೊನಾ ಆತಂಕ ಕಾರಣ ಹೆಚ್ಚಿನ ಯೋಜನೆ ಕೈಗೊಳ್ಳಲು ಸಾಧ್ಯವಾಗಲಿಲ್ಲ. ಬರುವ ದಿನಗಳಲ್ಲಿ ಅಭಿವೃದ್ಧಿ ನಿಗಮದ ಮೂಲಕ ಹೆಚ್ಚಿನ ಸೌಲಭ್ಯಗಳನ್ನು ರಾಜ್ಯದ ಜನತೆ ಪಡೆಯಲಿದ್ದಾರೆ ಎಂದು ಭರವಸೆ ನೀಡಿದರು.
ರಾಜ್ಯದಲ್ಲಿ 300 ಕೋಟಿ ಸಾಲ ಮರುಪಾವತಿಯಾಗಿಲ್ಲ
ದೇವರಾಜ ಅರಸು ಅಭಿವೃದ್ಧಿ ನಿಗಮಕ್ಕೆ ಕಳೆದ ಸಾಲಿನಲ್ಲಿ 250 ಕೋಟಿ ರೂ. ರಾಜ್ಯ ಸರ್ಕಾರ ಬಿಡುಗಡೆ ಮಾಡಿತು. 2019-20ರಲ್ಲಿ ಕೊರೊನಾ ವೈರಸ್ ಪರಿಣಾಮ 80 ಕೋಟಿ ಮಾತ್ರ ಸರ್ಕಾರ ಹಣ ಮಂಜೂರು ಮಾಡಿದೆ. ವಿವಿಧ ಯೋಜನೆಗಳ ಅಡಿಯಲ್ಲಿ ರಾಜ್ಯದಲ್ಲಿ ಸಾವಿರಾರು ಜನರು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಮೂಲಕ ಸಾಲ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಸುಮಾರು 300 ಕೋಟಿ ರೂ. ಫಲಾನುಭವಿಗಳಿಂದ ಸಾಲದ ಹಣ ಮರುಪಾವತಿಯಾಗಿಲ್ಲ ಎಂದು ತಿಳಿಸಿದರು.
ಓದಿ: ಸಿದ್ದರಾಮಯ್ಯನವರು ಕುರುಬರಿಗೆ ಮೀಸಲಾತಿ ಕೊಡಿಸುವುದನ್ನು ಬಿಟ್ಟು ಮಂಡಕ್ಕಿ ತಿನ್ನುತ್ತಿದ್ರಾ: ಈಶ್ವರಪ್ಪ
ಜಿಲ್ಲೆಯಲ್ಲಿ 2019-20 ಸಾಲಿನಲ್ಲಿ ಚೈತನ್ಯ ಯೋಜನೆ ಅಡಿಯಲ್ಲಿ 9 ಕೋಟಿ ರೂ. ಸಹಾಯಧನ ನೀಡಲಾಗಿದೆ. ಸ್ವಯಂ ಉದ್ಯೋಗಕ್ಕಾಗಿ 1.5 ಲಕ್ಷ ರೂ ಸಾಲ ನೀಡಲಾಗಿತ್ತು. ಇನ್ನು 322 ಫಲಾನುಭವಿಗಳಿಗೆ ಸಾಂಪ್ರದಾಯಿಕ ಕುಶಲ ಕರ್ಮಿಗಳ ಯೋಜನೆಯಡಿಯಲ್ಲಿ ಜಿಲ್ಲೆಯ 273 ಜನರಿಗೆ 1.25 ಲಕ್ಷ ಸಾಲ ನೀಡಲಾಗಿದೆ.
ಕಿರುಸಾಲ ಯೋಜನೆ ಅಡಿಯಲ್ಲಿ ಜಿಲ್ಲೆಯ ವ್ಯಾಪಾರಸ್ಥರಿಗೆ 11 ಲಕ್ಷ ರುಪಾಯಿ ಸಾಲ ನೀಡಲಾಗಿದೆ. ಅರಿವು ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಶೇ.1ರಷ್ಟು ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ದೇವರಾಜ ಅರಸು ಅಭಿವೃದ್ಧಿ ನಿಗಮದ ಮೂಲಕ ವಿತರಣೆ ಮಾಡಲಾಗುತ್ತಿದೆ ಎಂದರು.