ಚಿತ್ರದುರ್ಗ: ಬೆಂಗಳೂರಿನ ಕೆ.ಆರ್.ಪುರಂ ಠಾಣೆಯ ಪಿಎಸ್‌ಐ ಕಲ್ಲಪ್ಪ ಅವರ ಪಿಸ್ತೂಲ್ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಹೊಳಲ್ಕೆರೆ ತಾಲೂಕಿನ ಗುಂಡೇರಿ ಗ್ರಾಮದವರೆಂದು ತಿಳಿದು ಬಂದಿದೆ. ಆರೋಪಿಗಳು ಪಿಎಸ್‌ಐ ಕಲ್ಲಪ್ಪ ಅವರ ಪಿಸ್ತೂಲ್ ಕಳವು ಮಾಡಿ ಸ್ಥಳದಿಂದ ಪರಾರಿಯಾಗಿದ್ದರು.
ಪಿಸ್ತೂಲ್ ನಾಪತ್ತೆಯಾಗಿದ್ದರಿಂದ ಪಿಎಸ್‌ಐ ಕಲ್ಲಪ್ಪ ಅವರು, ತಕ್ಷಣ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಶುಕ್ರವಾರ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತನಿಖೆ ನಡೆಸಿ ಮೂವರನ್ನು ಬಂಧಿಸಿದ್ದಲ್ಲದೇ ಅವರಿಂದ ಪಿಸ್ತೂಲ್ ಮತ್ತು ಹತ್ತು ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣವೊಂದರ ತನಿಖೆಯ ನಿಮಿತ್ತ ಶಿವಮೊಗ್ಗದ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಬೆಂಗಳೂರು ಕೆ.ಆರ್.ಪುರಂ ಠಾಣೆಯ ಪಿಎಸ್‌ಐ ಕಲ್ಲಪ್ಪ, ಚಿತ್ರದುರ್ಗ ತಾಲೂಕಿನ ಜಾನಕೊಂಡ ಗ್ರಾಮ ಬಳಿಯ ರೆಸ್ಟೋರೆಂಟ್ವೊಂದರಲ್ಲಿ ಊಟಕ್ಕೆ ತೆರಳಿದ್ದರು. ಊಟ ಮಾಡುತ್ತಿದ್ದಾಗ ಪಿಸ್ತೂಲ್ ಮತ್ತು ಬ್ಯಾಗ್ ನಾಪತ್ತೆಯಾಗಿತ್ತು. ಊಟ ಮುಗಿಸಿ ಕೈತೊಳೆದುಕೊಂಡು ಬರುವಷ್ಟರಲ್ಲಿ ಪಿಸ್ತೂಲ್ ಮತ್ತು ಬ್ಯಾಗ್ ಅನ್ನು ಬಂಧಿತ ಕಿಡಿಗೇಡಿಗಳು ಎಗರಿಸಿ ಪರಾರಿಯಾಗಿದ್ದರು. ಪಿಸ್ತೂಲ್ ಕಳ್ಳತನ ನಡೆದಿದೆ ಎಂಬ ಮಾಹಿತಿ ಗೊತ್ತಾಗುತ್ತಿದ್ದಂತೆ ಖದೀಮರು, ಹೊಳಲ್ಕೆರೆ ತಾಲೂಕಿನ ಪೊಲೀಸ್ ಠಾಣೆಗೆ ತಾವೇ ಬಂದು ಶರಣಾಗಿದ್ದರು. ಬಳಿಕ ಚಿತ್ರದುರ್ಗ ಗ್ರಾಮಾಂತರ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಿ ಅವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: ಬೆಳಗಾವಿ: ಪಿಸ್ತೂಲ್ ತೋರಿಸಿ ಜ್ಯುವೆಲ್ಲರಿ ಶಾಪ್ ದರೋಡೆ ಯತ್ನ; ದುಷ್ಕರ್ಮಿಗಳೊಂದಿಗೆ ಗುದ್ದಾಡಿ ಗೆದ್ದ ಮಾಲೀಕ
ಇದನ್ನೂ ಓದಿ: 16 ವರ್ಷಗಳ ಹಿಂದೆ ಪಿಸ್ತೂಲ್ ಕಳ್ಳತನ: ಮಾಲೀಕರಿಗೆ ಹಿಂದಿರುಗಿಸಲು ಪೊಲೀಸರಿಗೆ ಹೈಕೋರ್ಟ್ ಸೂಚನೆ