ಚಿತ್ರದುರ್ಗ: ದೇವಸ್ಥಾನದ ಕಬ್ಬಿಣದ ಕಂಬಿಗಳನ್ನು ಕತ್ತರಿಸಿದ ಖದೀಮರು ಹುಂಡಿ ಹಣವನ್ನು ಕದ್ದು ಪರಾರಿಯಾಗಿರುವ ಘಟನೆ ಜಿಲ್ಲೆಯ ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯಲ್ಲಿರುವ ಚಳ್ಳಕೆರಮ್ಮ ದೇವಾಲಯದಲ್ಲಿ ನಡೆದಿದೆ.
ಚಳ್ಳಕೆರೆಯ ಅದಿದೇವತೆ ಚಳ್ಳಕೆರಮ್ಮ ದೇವಿಯ ಜಾತ್ರೆ ಐದು ವರ್ಷಕೊಮ್ಮೆ ನಡೆಯುತ್ತದೆ. ದಸರಾ ಹಬ್ಬದ ವೇಳೆಯೂ ಹೆಚ್ಚಿನ ಭಕ್ತರು ಬಂದು ದರ್ಶನ ಪಡೆದು ಹೋಗಿದ್ದರು. ಈ ಹಿನ್ನೆಲೆ, ಹುಂಡಿಯಲ್ಲಿ ಹೆಚ್ಚು ಹಣ ಸಂಗ್ರಹವಾಗಿರುತ್ತದೆ ಎಂದು ತಿಳಿದ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಕಳ್ಳರ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಖದೀಮರು ಯಾರೆಂಬುದು ತನಿಖೆ ಮೂಲಕ ತಿಳಿದು ಬರಬೇಕಿದೆ.
ಇದನ್ನೂ ಓದಿ: ಬೈಕ್ನಲ್ಲಿ ನೈಟ್ ರೌಂಡ್ಸ್ ಹಾಕಿದ ಬೆಳಗಾವಿ ಶಾಸಕ.. ಬೀದಿ ದೀಪಗಳ ದುರಸ್ತಿಗೆ ವಾರದ ಗಡುವು
ನಿನ್ನೆ ರಾತ್ರಿ ಕಳ್ಳರು ದೇವಸ್ಥಾನದ ಕಬ್ಬಿಣದ ಕಂಬಿಗಳನ್ನು ಮುರಿದು ಒಳ ನುಗ್ಗಿದ್ದು, ದೇವಾಲಯದ ಎರಡು ಹುಂಡಿಗಳನ್ನು ಒಡೆದು ಹುಂಡಿಯಲ್ಲಿನ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಚಳ್ಳಕೆರೆ ತಹಶೀಲ್ದಾರ್ ಎನ್ ರಘುಮೂರ್ತಿ, ಪೊಲೀಸ್ ಇನ್ಸ್ಪೆಕ್ಟರ್ ಜೆ. ತಿಪ್ಪೇಸ್ವಾಮಿ, ಪಿಎಸ್ಐ ಮಹೇಶ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಸ್ಥಾನ ಕಮಿಟಿಯವರು ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.