ಚಿತ್ರದುರ್ಗ: ಗಣಿಗಾರಿಕೆ ಹಾಗೂ ಕ್ರಷರ್‌ಗಳ ಹಾವಳಿಯಿಂದಾಗಿ ಜಿಲ್ಲೆಯ ಸುತ್ತ ಮುತ್ತಲ ಹಳ್ಳಿಗಳ ಜನರು ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ. ಗಣಿಗಾರಿಕೆ ವೇಳೆ ಸಿಡಿಸುವ ಸ್ಫೋಟಕದಿಂದಾಗಿ ಗ್ರಾಮದ ಅನೇಕ ಮನೆಗಳು ಬಿರುಕು ಬಿಟ್ಟು ಈಗಲೋ ಆಗಲೋ ಎನ್ನುತ್ತಿವೆ.
ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಗಣಿಗಾರಿಕೆ ಜಾರಿಯಲ್ಲಿದೆ. ಸರಿಯಾದ ಸುರಕ್ಷಿತ ಕ್ರಮಗಳನ್ನು ಅನುಸರಿಸದೆಯೇ ಕಾರ್ಯಾಚರಣೆಗಿಳಿಯುವುದರಿಂದ ಶಬ್ಧ ಹಾಗೂ ಕಂಪನದಿಂದಾಗಿ ಸುತ್ತಮುತ್ತಲ ಹಳ್ಳಿಗಳ ಮನೆಗಳು ಬಿರುಕು ಬೀಳುತ್ತವೆ. ಅಷ್ಟೇ ಅಲ್ಲದೇ ಕ್ರಷರ್‌ಗಳ ಹಾಗೂ ಧೂಳಿನಿಂದ ಜನರ ಆರೋಗ್ಯವೂ ಹಾಳಾಗುತ್ತಿದೆ. ಇದರಿಂದಾಗಿ ಹಲವು ಗ್ರಾಮಗಳಲ್ಲಿ ಜನರು ನೆಮ್ಮದಿಯಾಗಿ ಜೀವನ ನಡೆಸಲಾಗುತ್ತಿಲ್ಲ. ಇನ್ನೂ ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೆ ಅವರೂ ಕೂಡ ಕ್ಯಾರೆ ಎನ್ನುತ್ತಿಲ್ಲ ಎಂದು ಸಿಬಾರ್ ಗ್ರಾಮದ ಜನತೆ ಅಳಲು ತೋಡಿಕೊಂಡಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಕಟ್ಟಡ ಕಲ್ಲು ಗಣಿಗಾರಿಕೆಯಲ್ಲಿ ಹೆಚ್ಚಾಗಿ ಸ್ಫೋಟಕ ಬಳಸಲಾಗಿದೆಯಂತೆ. ಜಿಲ್ಲೆಯಲ್ಲಿ 94 ಗಾಣಿಗಾರಿಕೆಗಳಿವೆಯಂತೆ ಈ ಪೈಕಿ 54 ಚಾಲ್ತಿಯಲ್ಲಿದ್ದರೆ, ಇತ್ತ 34 ಗಣಿಗಾರಿಕೆಗಳ ಕಾರ್ಯ ಸ್ಥಗಿತಗೊಂಡಿವೆ. ಸರಿ ಇರುವ ಗಣಿಕಾರಿಕೆಗಳ ಪೈಕಿ 49 ಗಣಿಗಾರಿಕೆ ಸ್ಥಳದಲ್ಲಿ ಬ್ಲಾಸ್ಟಿಂಗ್ ಮಾಡಲಾಗುತ್ತಿದೆ. ಉಳಿದ 7 ಸ್ಥಳದಲ್ಲಿ ಬ್ಲಾಸ್ಟಿಂಗ್ ಬಳಕೆಗೆ ಅನುಮತಿಸಿಲ್ಲ. ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಗಣಿಗಾರಿಕೆ ಪರವಾನಗಿ ಪಡೆದುಕೊಂಡು ಗಣಿಗಾರಿಕೆ ಗುತ್ತಿಗೆದಾರರ ಜೊತೆಗೆ ಒಡಂಬಡಿಕೆ ಮೂಲಕ ಕಲ್ಲು ಬ್ಲಾಸ್ಟಿಂಗ್ ಮಾಡುತ್ತಿದೆ. ಜಿಲ್ಲೆಯಲ್ಲಿ ಈವರೆಗೂ ಯಾವುದೇ ಆಕ್ರಮ ಗಣಿಗಾರಿಕೆಗಳು ಕಂಡು ಬಂದಿಲ್ಲ ಎಂದು ಹೇಳುತ್ತಿದ್ದಾರೆ.