ಚಿತ್ರದುರ್ಗ: ಕೊರೊನಾ ಮಹಾಮಾರಿ ಇಡೀ ದೇಶದ ಆರ್ಥಿಕ ಸ್ಥಿತಿಯ ಚಿತ್ರಣ ಬದಲಿಸಿದೆ. ಪ್ರತಿಯೊಬ್ಬ ಬಡವರ್ಗದ ಜನ ಲಾಕ್ಡೌನ್ ನಿಂದಾಗಿ ದುಡಿಮೆ ಇಲ್ಲದೇ ಹೈರಾಣಾಗಿದ್ದಾರೆ. ಅದ್ರೇ ಇಲ್ಲೊಬ್ಬ ಬಡ ವಿಶೇಷಚೇತನ ವೃದ್ಧ ತನ್ನ ಜೀವನ ನಡೆಸಲು ಆಸರೆಯಾಗಿರುವ ಪಿಂಚಣಿ ಹಣಕ್ಕಾಗಿ ಗೋಣಿಚೀಲದ ಸಹಾಯದಿಂದ ತೆವಳುತ್ತಾ ಅಂಚೆ ಕಚೇರಿಗೆ ಅಲೆದಾಡುತ್ತಿರುವ ದೃಶ್ಯ ಮನ ಕಲಕುವಂತಿದೆ.
ಲಾಕ್ಡೌನ್ನಿಂದಾಗಿ ಹೊಟ್ಟೆಗೆ ಹಿಟ್ಟಿಲ್ಲದೇ ಹೈರಾಣಾಗಿರುವ ವೃದ್ಧ ಪೆನ್ನಪ್ಪ ಪಿಂಚಣಿ ಹಣಕ್ಕಾಗಿ ದಿನ ನಿತ್ಯ ಅಂಚೆಕಚೇರಿಗೆ ತೆವಳುತ್ತ ತಿರುಗಾಡುತ್ತಿದ್ದಾನೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯ ಪಿ.ಮಹದೇವಪುರ ಗ್ರಾಮ ಹೊರವಲಯದಲ್ಲಿ ವಾಸ ಮಾಡುತ್ತಿರುವ ವೃದ್ಧ ಪೆನ್ನಪ್ಪ, ಪಿ ಮಹಾದೇವಪುರದಲ್ಲಿರುವ ಅಂಚೆಕಚೇರಿಗೆ ಗೋಣಿ ಚೀಲದ ಸಹಾಯದಿಂದ ತೆವಳುತ್ತಾ ಹಣಕ್ಕಾಗಿ ಅಲೆದಾಟ ನಡೆಯುತ್ತಲೇ ಇದ್ದಾರೆ. ಆದರೆ ಅವರಿಗೆ ಪಿಂಚಣಿ ಹಣ ಮಾತ್ರ ಸಿಕ್ಕಿಲ್ಲವಂತೆ.
ಲಾಕ್ಡೌನ್ನಿಂದ ಮೂರು ತಿಂಗಳ ಸಾಮಾಜಿಕ ಭದ್ರತಾ ಪಿಂಚಣಿ ಹಣವನ್ನು ಖಾತೆಗೆ ಹಾಕುತ್ತೇವೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಘೋಷಿಸಿದ ಬೆನ್ನಲ್ಲೇ ವೃದ್ಧ ಪೆನ್ನಪ್ಪ ಪಿಂಚಣಿ ಪಡೆಯಲು ಸುಡು ಬಿಸಿಲು ಲೆಕ್ಕಿಸದೇ ತೆವಳುತ್ತಾ ಪಿಂಚಣಿ ಹಣಕ್ಕಾಗಿ ಅಲೆಯುತ್ತಿದ್ದಾರೆ.