ಚಿತ್ರದುರ್ಗ: ರಾಜ್ಯದಲ್ಲಿ ಕೊರೊನಾ ಸೋಂಕಿನ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಸರ್ಕಾರ ಈಗಾಗಲೇ ಮದ್ಯ ಮಾರಟಕ್ಕೆ ಅವಕಾಶ ನೀಡಿದ್ದನ್ನು ಖಂಡಿಸಿ ಜಿಲ್ಲೆಯ ಮಠಾಧೀಶರಿಂದ ಭಾರೀ ವಿರೋಧ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಮದ್ಯ ಸೇವಿನೆಯಿಂದ ಅವಾಂತರ ಸೃಷ್ಟಿಯಾದ ಪ್ರಕರಣಗಳನ್ನು ಗಮನದಲ್ಲಿ ಇಟ್ಟುಕೊಂಡು ಮದ್ಯ ನಿಷೇಧ ಮಾಡುವಂತೆ ಸಿಎಂ ಯಡಿಯೂರಪ್ಪನವರಿಗೆ ಪತ್ರ ಬರೆದಿದ್ದಾರೆ. ಸಿಎಂ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡದಿರುವುದು ಮಠಾಧೀಶರ ಆಕ್ರೋಶಕ್ಕೆ ಕಾರಣವಾಗಿದೆ. ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಮದಾರ ಚೆನ್ನಯ್ಯ ಗುರು ಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಧ್ವನಿಗೂಡಿಸಿದ್ದಾರೆ.
ಕೊರೊನಾ ಸೋಂಕಿನಿಂದ ಜನರ ಜೀವನ ತತ್ತರಿಸಿದೆ. ಈ ಸಂದರ್ಭದಲ್ಲಿ ಮದ್ಯಪಾನಕ್ಕಾಗಿ ಹಪಹಪಿಸುತ್ತಿರುವ ಕುಡುಕರಿಗೆ ಸರ್ಕಾರದಿಂದ ವಿತರಣೆ ಮಾಡುವ ಉಚಿತ ದಿನಸಿ ಸೇರಿದಂತೆ ಯಾವುದೇ ಸೌಲಭ್ಯ ನೀಡಬಾರದು ಎಂದು ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶ್ರೀ ಸರ್ಕಾರಕ್ಕೆ ಮನವಿ ಮಾಡಿದರು.
ಲಾಕ್ಡೌನ್ ವೇಳೆ ಮದ್ಯ ನಿಷೇಧವನ್ನು ಮುಂದುವರೆಸಬೇಕು. ಕೊರೊನಾ ತಡೆಗೆ ಹಗಲಿರುಳು ಶ್ರಮಿಸಲಾಗುತ್ತಿದೆ. ಮದ್ಯ ಮಾರಾಟದಿಂದ ಅವರ ಪ್ರಯತ್ನಕ್ಕೆ ಹಿನ್ನಡೆಯಾಗಬಹುದು. ಆದ್ದರಿಂದ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುವುದು ಸರಿಯಲ್ಲ ಎಂದು ಮಾದರ ಚೆನ್ನಯ್ಯ ಸ್ವಾಮೀಜಿ ಧ್ವನಿಗೂಡಿಸಿದ್ದಾರೆ.