ಚಿತ್ರದುರ್ಗ: ಉತ್ತರ ಕರ್ನಾಟಕದಲ್ಲಿ ಸುರಿದ ಮಹಾಮಳೆಯಿಂದ ಜನರ ಬದುಕು ಜರ್ಜರಿತಗೊಂಡಿದೆ. ಮನೆ-ಮಠ ಕಳೆದುಕೊಂಡಿರುವ ನೆರೆ ಸಂತ್ರಸ್ತರ ಸಹಾಯಕ್ಕೆ ಇಡೀ ರಾಜ್ಯವೇ ಕೈಜೋಡಿಸಿದೆ. ಕೋಟೆನಾಡಿನ ಶ್ರೀ ಕನಕ ಗುರುಪೀಠದ ಶಾಖಾ ಮಠದ ಶ್ರೀ ಈಶ್ವರಾನಂದಪುರಿ ಶ್ರೀಗಳು ಸಹ ಸಂತ್ರಸ್ತರಿಗೆ ನೆರವಾಗಲು ಮುಂದಾಗಿದ್ದಾರೆ. ಅದಕ್ಕಾಗಿ ಕರಿ ಕಂಬಳಿ, ಜೋಳಿಗೆ ಹಿಡಿದು ಮನೆ ಮನೆಗೆ ತೆರಳಿ ಭಿಕ್ಷಾಟನೆ ಮಾಡುತ್ತಿದ್ದಾರೆ.
ಭಿಕ್ಷಾಟನೆಯಿಂದ ಬಂದ ದವಸ-ಧಾನ್ಯ, ವಸ್ತುಗಳನ್ನು ನೆರೆ ಸಂತ್ರಸ್ತರಿಗೆ ರವಾನಿಸಲು ನಿರ್ಧರಿಸಿದ್ದಾರೆ. ಶ್ರಾವಣ ಮಾಸದಲ್ಲಿ ಭಕ್ತರ ಮನೆ ಮನೆಗೂ ತೆರಳಿ ಭಿಕ್ಷಾಟನೆ ನಡೆಸಿದ್ದಾರೆ. ಭಕ್ತರಿಂದ ರಾಗಿ, ಜೋಳ, ಅಕ್ಕಿ, ಹಿಟ್ಟು, ಗೋಧಿ, ಬೇಳೆ, ಉಪ್ಪು, ಮೆಣಸಿನಕಾಯಿ ಸೇರಿದಂತೆ ಆಹಾರ ಧಾನ್ಯಗಳನ್ನೂ ಸಂಗ್ರಹಿಸಲಾಗುತ್ತಿದೆ. ಜತೆಗೆ ಭಕ್ತರ ಶಕ್ತ್ಯಾನುಸಾರ ಧನ ಸಹಾಯವನ್ನೂ ಭಿಕ್ಷಾಟನೆ ಮೂಲಕ ಪಡೆದಿದ್ದಾರೆ. ಇವೆಲ್ಲವನ್ನೂ ನೆರೆಪೀಡಿತ ಜಿಲ್ಲೆಗಳಿಗೆ ಕಳುಹಿಸಿ ಕೊಡಲಾಗುತ್ತಿದೆ.
ಶ್ರಾವಣ ಭಿಕ್ಷೆ ಕಾರ್ಯಕ್ರಮಕ್ಕೆ ಅಗಸ್ಟ್ 16ರಂದು ಹಿರಿಯೂರಿನ ಹರ್ತಿಕೋಟೆಯ ಶ್ರೀಗುರು ರೇವಣಸಿದ್ಧೇಶ್ವರ ಗುರುಪೀಠದಿಂದ ಚಾಲನೆ ದೊರೆತಿದೆ. ಶ್ರೀಗಳು 39 ತಾಲೂಕುಗಳಲ್ಲಿ ಭಕ್ತರ ಮನೆಗೆ ಭೇಟಿ ನೀಡಿ ಭಿಕ್ಷೆ ಸ್ವೀಕರಿಸಲಿದ್ದಾರೆ. ಶ್ರೀಗಳು ಕಾರ್ಯ ಜನಸಾಮಾನ್ಯರ ಪ್ರಶಂಸೆಗೆ ಪಾತ್ರವಾಗಿದೆ.