ಚಿತ್ರದುರ್ಗ: ನ್ಯಾಯಾಲಯದ ಆದೇಶ ಮೀರಿ ಅನೇಕ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಶಾಲಾ ಕಾಲೇಜುಗಳಿಗೆ ಹೋಗಿದ್ದಾರೆ. ಕೋರ್ಟ್ ಆದೇಶವನ್ನು ಉಲ್ಲಂಘಿಸದೇ ಅದರ ಪ್ರಕಾರ, ಸಮವಸ್ತ್ರ ಧರಿಸಿಕೊಂಡು ಹೋಗಿ ಎಂದು ಹೇಳಲು ನಾನು ಇಷ್ಟ ಪಡುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಚಿತ್ರದುರ್ಗದಲ್ಲಿ ಹೇಳಿದ್ದಾರೆ.
ಕೋರ್ಟ್ ಆದೇಶವನ್ನು ಮೀರಿ ಈ ಪ್ರಯತ್ನ ನಡೆದರೆ, ಕಾನೂನು ಮೀರಿದ ಹಾಗೆ ಆಗುತ್ತದೆ. ನಂತರ ಕೋರ್ಟ್ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಗೊತ್ತಿಲ್ಲ. ಆದ್ದರಿಂದ ಡಿಕೆಶಿ ಮತ್ತು ಸಿದ್ದರಾಮಯ್ಯ ಅವರುಗಳು ವಿದ್ಯಾರ್ಥಿಗಳಿಗೆ ಬುದ್ಧಿ ಹೇಳುವುದು ಬಿಟ್ಟು ಬಿಜೆಪಿ ನಿಲುವು ದೇಶ ವಿಭಜನೆ ಮಾಡುವುದು ಎಂದು ಹೇಳುವುದು ಸರಿಯಲ್ಲ.
ಸಮವಸ್ತ್ರ ಧರಿಸಿ ಶಾಲೆಗೆ ಹೋಗಬೇಕು ಎಂದು ಹೇಳಿರುವುದು ನಾವಲ್ಲ ನ್ಯಾಯಾಲಯ. ಶಾಲಾ ಕಾಲೇಜಿಗೆ ಹಿಜಾಬ್ ಧರಿಸಿಕೊಂಡು ಹೋಗಿ ತಮ್ಮ ಭವಿಷ್ಯ ಕೆಡಿಸಿಕೊಳ್ಳಬೇಡಿ ಎಂದು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಂಗ್ರೆಸ್ ಮುಖಂಡರು ಹೇಳಿ ಎಂದು ಈಶ್ವರಪ್ಪ ಕಿವಿ ಮಾತು ಹೇಳಿದರು.
ಯಾವುದೇ ಕಾರಣಕ್ಕೂ ಇದು ಮುಂದುವರೆಯುವುದು ಬೇಡ, ಮುಂದುವರೆಯುತ್ತಾ ಹೋದರೆ ಹಿಂದೂ - ಮುಸ್ಲಿಂ ನಡುವೆ ಅಂತರ ಹೆಚ್ಚಾಗುತ್ತದೆ. ಇದೇ ದೇಶದಲ್ಲಿ ಹಿಂದೂ- ಮುಸ್ಲಿಂಮರು ಹುಟ್ಟಿದ್ದೇವೆ. ಒಟ್ಟಾಗಿ ಹೋಗಲಿಲ್ಲ ಎಂದರೆ ತುಂಬಾ ಕಷ್ಟವಾಗುತ್ತದೆ. ಕಾಂಗ್ರೆಸ್ ಪಕ್ಷ ಮುಸ್ಲಿಂ ಹೆಣ್ಣು ಮಕ್ಕಳನ್ನು ಬಳಸಿಕೊಂಡು ಈ ರೀತಿ ಮಾಡುತ್ತಿರುವುದು ಸರಿಯಲ್ಲ. ಕೋರ್ಟ್ ಆದೇಶವನ್ನು ಎಲ್ಲರೂ ಪಾಲಿಸಬೇಕು. ಕೋರ್ಟ್ ಆದೇಶವನ್ನು ಹೆಚ್ ಸಿ ಮಹದೇವಪ್ಪ, ಸಿದ್ದರಾಮಯ್ಯ ಹಾಗೂ ಡಿಕೆಶಿ ಕೇಳುತ್ತಾರೋ ಇಲ್ವೋ ಹೇಳಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ನಾನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ: ಡಿಕೆಶಿಗೆ ಜಮೀರ್ ಅಹ್ಮದ್ ತಿರುಗೇಟು
ಕಾಂಗ್ರೆಸ್ನವರು ಕುಬೇರರು ಇಷ್ಟು ವರ್ಷಗಳ ಕಾಲ ಸಾಲವಿಲ್ಲದೇ ಆಡಳಿತ ನಡೆಸಿದ್ದಾರೆ. ಹೀಗಾಗಿ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿಲ್ಲ, ಆದರೆ, ಪ್ರಧಾನ ಮಂತ್ರಿಗಳು ಜೆಜೆಎಂ ಯೋಜನೆಯ ಮೂಲಕ ಮನೆ ಮನೆಗೆ ಗಂಗೆ ಯೋಜನೆ ತಂದು ಕುಡಿಯುವ ನೀರು ಕೊಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.