ಚಿತ್ರದುರ್ಗ: ಅಂದಿನ ಬಿಜೆಪಿ ಸರ್ಕಾರವೇ ಕೋಟೆನಾಡಿಗೆ ಮೆಡಿಕಲ್ ಕಾಲೇಜು ನಿರ್ಮಾಣದ ಹಸಿರು ನಿಶಾನೆ ತೋರಿತು. ಆದರೆ ಎಂಟು ವರ್ಷ ಗತಿಸಿದರೂ ಜಿಲ್ಲೆಗೆ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಮುಂದಾಗದೇ ಮಿನಾಮೇಷ ಎಣಿಸುತ್ತಿದೆ ಅಂತಾ ಜನರು ಆರೋಪಿಸುತ್ತಿದ್ದಾರೆ.
2013 ರಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಸರ್ಕಾರ ಮೆಡಿಕಲ್ ಕಾಲೇಜ್ ಆರಂಭಿಸುವುದಾಗಿ ಅಂದಿನ ಬಿಜೆಪಿ ಭರವಸೆ ನೀಡಿತ್ತು. ಅದಕ್ಕಾಗಿ ಜಿಲ್ಲಾಸ್ಪತ್ರೆ ಹಿಂಭಾಗದಲ್ಲಿ ಕಾಲೇಜು ನಿರ್ಮಾಣಕ್ಕೆ ಜಾಗ ಕೂಡ ನಿಗದಿ ಮಾಡಿದೆ. ಆದರೆ ಇದುವರೆಗೂ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಹಣ ಬಿಡುಗಡೆಗೊಳಿಸಿ, ಕಾಮಗಾರಿ ಆರಂಭಗೊಳಿಸದಿರುವುದು ಜಿಲ್ಲೆಯ ಜನತೆಯನ್ನು ಕೆರಳಿಸಿದೆ. ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಆಗ್ರಹಿಸಿ ಹೋರಾಟ ಮಾಡಿದ್ರೂ, ಸರ್ಕಾರ ಕ್ಯಾರೆ ಎನ್ನುತ್ತಿಲ್ಲ ಎಂದು ಹೋರಾಟಗಾರರು ಸರ್ಕಾರದ ವಿರುದ್ಧ ಗಂಭೀರವಾಗಿ ಆರೋಪ ಮಾಡುತ್ತಿದ್ದಾರೆ. ಜಿಲ್ಲಾಡಳಿತ ಕಾಲೇಜು ನಿರ್ಮಾಣಕ್ಕೆ ನಿಗದಿಪಡಿಸಿದ ಜಾಗದಲ್ಲಿ ಗಿಡಗಂಟೆ ಬೆಳೆಯಲು ದಾರಿ ಮಾಡಿಕೊಟ್ಟಂತೆ ಕಾಣುತ್ತಿದೆ ಎಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.
ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲು ಸರ್ಕಾರ ಹಿಂದೇಟು:
ಇತ್ತೀಚೆಗಷ್ಟೇ ನಡೆದ ವಿಧಾನಸಭಾ ಕಲಾಪ ವೇಳೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್, ಚಿತ್ರದುರ್ಗ ಜಿಲ್ಲೆಯ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುವ ವಿಚಾರದಲ್ಲಿ ಮೌನವಹಿಸಿದ್ದಾರೆ ಎನ್ನಲಾಗ್ತಿದೆ. ಇದು ಕೋಟೆನಾಡಿನ ಜನರನ್ನು ಸಿಡಿಮಿಡಿಗೊಳ್ಳುವಂತೆ ಮಾಡಿದೆ.
ಮೆಡಿಕಲ್ ಕಾಲೇಜು ನಿರ್ಮಾಣವಾಗದಿದ್ರೆ ಸದನದಿಂದ ದೂರವಿರುವ ಖಡಕ್ ಸಂದೇಶ:
ಮೆಡಿಕಲ್ ಕಾಲೇಜು ನಿರ್ಮಾಣದ ವಿಚಾರದಲ್ಲಿ ಜಿಲ್ಲೆಯ ಶಾಸಕರು ಒಗ್ಗಟ್ಟಿನ ಮಂತ್ರ ಜಪಿಸಲು ಮುಂದಾಗುತ್ತಿದ್ದಾರೆ. ಸೋಮವಾರ ನಡೆದ ಮಾಧ್ಯಮಗೋಷ್ಟಿಯಲ್ಲಿ ಬಿಜೆಪಿ ಹಿರಿಯ ಶಾಸಕ ಜಿ ಎಚ್ ತಿಪ್ಪಾರೆಡ್ಡಿ, ಸಚಿವ ಶ್ರೀರಾಮುಲು, ಈ ಬಾರಿ ಸರ್ಕಾರ ಮೆಡಿಕಲ್ ಕಾಲೇಜು ನಿರ್ಮಾಣ ಮಾಡಲು ಹಿಂದೇಟು ಹಾಕಿದರೆ, ಜಿಲ್ಲೆಯ ಎಲ್ಲ ಶಾಸಕರು ಸದನದಿಂದ ದೂರ ಇರುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಮಾತನಾಡಿ, ಜಿಲ್ಲೆಗೆ ಮೆಡಿಕಲ್ ಕಾಲೇಜು ನಿರ್ಮಾಣವಾಗಬೇಕೆಂಬುದೇ ನನ್ನ ಉದ್ದೇಶವಾಗಿದೆ. ಸಿಎಂ ಜೊತೆಗೆ ಚರ್ಚಿಸಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಲು ಕ್ರಮಕ್ಕೆ ಮುಂದಾಗುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಗೋ ಹತ್ಯೆ ನಿಷೇಧ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ: ಕಾಯ್ದೆ ಸಂಬಂಧ ಸರ್ಕಾರದಿಂದ ಅಧಿಸೂಚನೆ!