ಚಿತ್ರದುರ್ಗ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಕಳೆದ ಫೆ. 07 ರಿಂದ ಫೆ.09 ರವರೆಗೆ ಬೀದರ್ನಲ್ಲಿ ‘ರಾಜ್ಯ ಮಟ್ಟದ ಪಶುಮೇಳ’ ಅಂಗವಾಗಿ ಆಯೋಜಿಸಿದ್ದ ಜಾನುವಾರು ಪ್ರದರ್ಶನದಲ್ಲಿ ಚಿತ್ರದುರ್ಗ ತಾಲೂಕು ಗೊಲ್ಲನಕಟ್ಟೆ ತಿಮ್ಮಣ್ಣ ಸಿದ್ದಪ್ಪ ಅವರ ನಂದಿದುರ್ಗ ಮೇಕೆ ತಳಿಗೆ ದ್ವಿತೀಯ ಬಹುಮಾನ ಲಭಿಸಿದೆ.
ಬೀದರ್ನಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಪಶುಮೇಳದಲ್ಲಿ ಭಾಗವಹಿಸಲು ಜಿಲ್ಲೆಯ 06 ತಾಲೂಕುಗಳಿಂದ ತಲಾ 10 ರೈತರಂತೆ ಜಿಲ್ಲೆಯಿಂದ ಒಟ್ಟು 50 ರೈತರನ್ನು ಪಶುಮೇಳದಲ್ಲಿ ಪಾಲ್ಗೊಳ್ಳಲು ಪಶುಸಂಗೋಪನೆ ಇಲಾಖೆ ವ್ಯವಸ್ಥೆಗೊಳಿಸಿತ್ತು. ಈ ಮೇಳದಲ್ಲಿ ಏರ್ಪಡಿಸಿದ್ದ ಜಾನುವಾರು ಪ್ರದರ್ಶನ ಸ್ಪರ್ಧೆಗೆ ಜಿಲ್ಲೆಯಿಂದ ‘ನಂದಿದುರ್ಗ’ ಮೇಕೆ ತಳಿಯನ್ನು ಪ್ರದರ್ಶಿಸಿದ್ದು, ಇದಕ್ಕೆ ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾನ ಬಂದಿದೆ. ಮೇಕೆಯ ಮಾಲೀಕ ಗೊಲ್ಲನಕಟ್ಟೆ ತಿಮ್ಮಣ್ಣ ಸಿದ್ದಪ್ಪ ಅವರಿಗೆ ಪಶುಮೇಳದಲ್ಲಿ ಪ್ರಶಸ್ತಿ ಪತ್ರವನ್ನು ವಿತರಣೆ ಮಾಡಲಾಗಿದೆ.
ವಿಶೇಷತೆ:
ನಂದಿದುರ್ಗ ಮೇಕೆ ತಳಿಯ ವಿಶೇಷತೆ ಎಂದರೆ, ಇದರ ಮೂಲಸ್ಥಾನ ಚಿತ್ರದುರ್ಗ ಜಿಲ್ಲೆ. ಈ ತಳಿ ಬಿಳಿ ಬಣ್ಣದ್ದಾಗಿದ್ದು, ಸರಾಸರಿ ದೇಹದ ತೂಕ ಗಂಡು 26 ರಿಂದ 56 ಕೆ.ಜಿ, ಹೆಣ್ಣು 24 ರಿಂದ 41 ಕೆ.ಜಿ. ತೂಗುತ್ತದೆ. ಮೇಕೆಗಳ ಕೊಂಬುಗಳು ಹಿಮ್ಮುಖವಾಗಿರುತ್ತವೆ, ಕಿವಿಗಳು ನೇತಾಡುತ್ತಿರುತ್ತವೆ. ಇದು ಮುಖ್ಯವಾಗಿ ಮಾಂಸದ ತಳಿಯಾಗಿದ್ದು, ಸಾಮಾನ್ಯವಾಗಿ ಅವಳಿ ಮರಿಗಳಿಗೆ ಜನ್ಮ ನೀಡುತ್ತವೆ.