ಚಿತ್ರದುರ್ಗ: ಕೊರೊನಾದಿಂದ ಪಾರಾಗಲು ಸಾಮಾಜಿಕ ಅಂತರ ಮುಖ್ಯ ಎಂದು ಸಚಿವ ಶ್ರೀರಾಮುಲು, ಜನರಿಗೆ ಸಾಮಾಜಿಕ ಅಂತರದ ಬಗ್ಗೆ ಪಾಠ ಮಾಡಿದರು. ವಿಶೇಷ ಎಂದರೆ, ಆಡಂಬರದ ಮೆರವಣಿಗೆ ಕಾರ್ಯಕ್ರಮದಲ್ಲಿ ನಿಯಮ ಉಲ್ಲಂಘನೆ ಆರೋಪ ಕೇಳಿ ಬಂದಿತ್ತು.
ಇದನ್ನೂ ಓದಿ: ಬಿ ಶ್ರೀರಾಮುಲುಗೆ ಹೂವಿನ ಮಳೆ.. ಸಾಮಾಜಿಕ ಅಂತರ ಮರೆತೇಬಿಟ್ಟರಾ ಹೆಲ್ತ್ ಮಿನಿಸ್ಟರ್..?
ಜಿಲ್ಲೆಯ ಪರಶುರಾಮಪುರದಲ್ಲಿರುವ ವೇದಾವತಿ ನದಿಯ ಬ್ಯಾರೇಜ್ಗೆ ಬಾಗಿನ ಅರ್ಪಣೆ ಮಾಡಿದ ಬಳಿಕ ಜನರನ್ನುದ್ದೇಶಿಸಿ ಮಾತನಾಡಿದ ಸಚಿವ ಶ್ರೀರಾಮುಲು, ನಿಮ್ಮ ಶಕ್ತಿಯನ್ನು ತಡೆಯಲು ನಮ್ಮಿಂದ ಆಗಲ್ಲ, ನನ್ನನ್ನು ಸಹ ತಳ್ಳಿಕೊಂಡು ಹೋಗ್ತೀರಿ ಎಂದು ಅಲ್ಲಿ ನಡೆದ ಆಡಂಬರದ ಮೆರವಣಿಗೆ ಬಗ್ಗೆ ವರ್ಣನೆ ಮಾಡಿದರು.
ದೇಶದ ಪ್ರಧಾನಿ, ರಾಜ್ಯದ ಮುಖ್ಯಮಂತ್ರಿಗಳ ಮಾತುಗಳನ್ನು ನಾವು - ನೀವು ಕೇಳಲೇಬೇಕು. ಮಾಸ್ಕ್, ಟವಲ್, ಮಫ್ಲರ್ ಕಟ್ಟಿಕೊಳ್ಳಬೇಕು. ಸಾರ್ವಜನಿಕ ಸಭೆ ನಡೆಸಲು ಅವಕಾಶ ಇಲ್ಲ. ಹಾಗಾಗಿ ಮುಂದಿನ 3 ಕಾರ್ಯಕ್ರಮ ರದ್ದುಪಡಿಸಿ ಬೆಂಗಳೂರಿಗೆ ಹೋಗುವುದಾಗಿ ತಿಳಿಸಿದರು.
ಆಡಂಬರದ ಕಾರ್ಯಕ್ರಮ ಬೇಡ ಎನ್ನುವ ಬದಲು ಸಚಿವ ಶ್ರೀರಾಮುಲು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿರುವ ದೃಶ್ಯ ಕಣ್ಣಿಗೆ ರಾಚುತ್ತಿದ್ದವು. ಈ ಬಗ್ಗೆ ಈಟಿವಿ ಭಾರತದಲ್ಲಿ ವರದಿ ಸಹ ಪ್ರಕಟವಾಗಿತ್ತು.