ಚಿತ್ರದುರ್ಗ: ಸಿದ್ಧರಾಮಯ್ಯಗೆ ನೈತಿಕತೆ ಇಲ್ಲ, ಕ್ವಾಲಿಫಿಕೇಶನ್ನೂ ಇಲ್ಲ. ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ ಸೇರಿದವರು ಅವರು ಎಂದು ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಸ್ಥಾನ ತಪ್ಪಿಸಿದರು. ಕಾಂಗ್ರೆಸ್ ಈಗ ಮೂರು ಬಾಗಿಲಾಗಿದೆ. ಮೊದಲು ಅವರ ಪಕ್ಷವನ್ನು ಸರಿಪಡಿಸಿಕೊಳ್ಳಲಿ ಎಂದು ವಾಕ್ಪ್ರಹಾರ ನಡೆಸಿದರು.
ಅಧಿಕಾರ ಕಳೆದುಕೊಂಡ ಮೇಲೆ ಸಿದ್ಧರಾಮಯ್ಯಗೆ ಮತಿಭ್ರಮಣೆಯಾಗಿದೆ. ಪ್ರಚಾರಕ್ಕಾಗಿ ಬಿಜೆಪಿ ವಿರುದ್ಧ ಹೇಳಿಕೆ ಕೊಡುತ್ತಿದ್ದಾರೆ. ಸದ್ಯ ಅವರು ರಾಜಕೀಯ ನಿವೃತ್ತಿ ಪಡೆಯುವುದು ಒಳಿತು ಎಂದು ಕುಟುಕಿದರು.
ಸಿಎಂ ಬಿಎಸ್ವೈ ಮನೆ ಮಠ ಬಿಟ್ಟು 40 ವರ್ಷ ಪಕ್ಷಕ್ಕಾಗಿ ದುಡಿದವರು. ಅವರ ಬಗ್ಗೆ ಮಾತನಾಡುವುದು ನಮಗೆ ನೋವು ತಂದಿದೆ. ಆಂತರಿಕ ವಿಷಯಗಳನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕಾಗುತ್ತದೆ. ಏನಾದರೂ ಸಮಸ್ಯೆಯಿದ್ದರೆ ಚರ್ಚಿಸಲು ರಾಜ್ಯಾಧ್ಯಕ್ಷ ಕಟೀಲು ಸಿದ್ಧರಿದ್ದಾರೆ. ನಾಯಕತ್ವ ಬದಲಾವಣೆ ಇಲ್ಲ ಎಂದು ವರಿಷ್ಠರು ಸ್ಪಷ್ಟ ಪಡಿಸಿದ್ದು, ಯಾರೂ ಹಿಟ್ ಅಂಡ್ ರನ್ ಹೇಳಿಕೆ ಕೊಡಬಾರದು ಎಂದು ಪರೋಕ್ಷವಾಗಿ ಹೆಚ್. ವಿಶ್ವನಾಥ್ ಹಾಗೂ ಶಾಸಕ ಯತ್ನಾಳ್ಗೆ ಎಚ್ಚರಿಕೆ ಕೊಟ್ಟರು.