ಚಿತ್ರದುರ್ಗ: ಶಾಲಾ-ಕಾಲೇಜುಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಿದ್ದು, ಜಿಲ್ಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವಿದ್ಯಾಗಮ ಹಾಗೂ ತರಗತಿಗಳನ್ನು ಪುನಾರಂಭಿಸಲು ಎಂದು ಅಪರ ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.
ಈ ಕುರಿತಂತೆ ಈಟಿವಿ ಭಾರತದೊಂದಿಗೆ ಮಾಹಿತಿ ನೀಡಿದ ಅವರು, ಕೋವಿಡ್ ಕಾರಣದಿಂದ ಕಳೆದ ಏಳೆಂಟು ತಿಂಗಳಿಂದ ಬಂದ್ ಆಗಿದ್ದ ಶಾಲಾ-ಕಾಲೇಜುಗಳನ್ನು ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಜ.01ರಿಂದ ವಿದ್ಯಾಗಮ ಮೂಲಕ ತರಗತಿಗಳು ಆರಂಭವಾಗಲಿವೆ. ಕೊರೊನಾ ಹಿನ್ನೆಲೆಯಲ್ಲಿ ಕೆಲವು ಮುಂಜಾಗ್ರತಾ ಕ್ರಮಗಳ ಪಾಲನೆಯೊಂದಿಗೆ ಹತ್ತು ಮತ್ತು ಪಿಯುಸಿ ಹಾಗೂ 6ರಿಂದ 9ನೇ ತರಗತಿಗಳಿಗೆ ವಿದ್ಯಾಗಮ ನಡೆಸಲು ಸರ್ಕಾರ ಅನುಮತಿ ನೀಡಿದೆ. ಜಿಲ್ಲೆಯಲ್ಲಿ ಕೊರೊನಾ ತಡೆ ಹಾಗೂ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ತರಗತಿ ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.
ಓದಿ: ಎಐಸಿಸಿ ಕಾರ್ಯದರ್ಶಿಯಾಗಿ ಐವನ್ ಡಿಸೋಜ ನೇಮಕ
ಪ್ರತಿದಿನವೂ ಕೊಠಡಿಗಳಿಗೆ ಸ್ಯಾನಿಟೈಸರ್, ರಾಸಾಯನಿಕ ದ್ರಾವಣ ಸಿಂಪಡಣೆ ಹಾಗೂ ಥರ್ಮಲ್ ಸ್ಕ್ರೀನಿಂಗ್ ಜೊತೆಗೆ ಶಿಕ್ಷಣ ಇಲಾಖೆಗಳ ಮಾರ್ಗಸೂಚಿ ಅನುಸರಿಸಲಾಗುವುದು. ವಿದ್ಯಾರ್ಥಿಗಳ ಹಾಗೂ ಪಾಲಕರ ಜಾಗೃತಿಯೊಂದಿಗೆ ಜಿಲ್ಲೆಯಲ್ಲಿ ತರಗತಿಗಳ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುವುದು. ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಯಾವುದೇ ತೊಂದರೆಯಾದ ರೀತಿಯಲ್ಲಿ ತರಗತಿಗಳನ್ನು ಆರಂಭಿಸುತ್ತೇವೆ. ಇದಕ್ಕೆ ವಿವಿಧ ಇಲಾಖೆಗಳ ಸಹಕಾರ ಪಡೆಯಲಾಗುವುದು ಎಂದು ತಿಳಿಸಿದರು.