ಚಿತ್ರದುರ್ಗ: ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಅನ್ವಯ ಒಟ್ಟು 12 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.
ಜಿಲ್ಲೆಯಲ್ಲಿ ಇದುವರೆಗೂ 447 ಶಂಕಿತರ ಗಂಟಲು ದ್ರವ ಹಾಗೂ ರಕ್ತ ಮಾದರಿಯನ್ನು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ ಈವರೆಗೆ 390 ಜನರ ವರದಿ ನೆಗಟಿವ್ ಎಂದು ವರದಿಯಾಗಿದೆ. ಇವರ ಪೈಕಿ 36 ಜನರ ಪರೀಕ್ಷಾ ವರದಿ ಬರುವುದು ಬಾಕಿ ಇದೆ. ಇದುವರೆಗೂ ಜಿಲ್ಲೆಯ ಭೀಮ ಸಮುದ್ರದಲ್ಲಿ ವರದಿಯಾಗಿದ್ದ 01 ಕೋವಿಡ್-19 ಪ್ರಕರಣ ಹೊರತುಪಡಿಸಿ, ಯಾವುದೇ ಪಾಸಿಟಿವ್ ಪ್ರಕರಣ ಕೋಟೆನಾಡಿನಲ್ಲಿ ವರದಿಯಾಗಿಲ್ಲ. ಈವರೆಗೆ ಜಿಲ್ಲೆಯಲ್ಲಿ 310 ಜನರು 14 ದಿನಗಳ ಹಾಗೂ 296 ಜನರು 28 ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ.
ವಿದೇಶ ಪ್ರಯಾಣದ ಇತಿಹಾಸ ಹಾಗೂ ಇವರ ಸಂಪರ್ಕ ಹಿನ್ನೆಲೆ ಹೊಂದಿದ್ದವರ ಪೈಕಿ ಈಗ ಯಾರನ್ನೂ ಹೋಂ ಕ್ವಾರಂಟೈನ್ ನಿಗಾನಲ್ಲಿ ಇರಿಸಲಾಗಿಲ್ಲ. 764 ಜನರಿಗೆ ಸ್ಕ್ರೀನಿಂಗ್ ಮಾಡಲಾಗಿದ್ದು, ಇದುವರೆಗೂ ಹೊರ ರಾಜ್ಯ ಹಾಗೂ ಜಿಲ್ಲೆಗಳಿಂದ ಈ ಜಿಲ್ಲೆಗೆ ಆಗಮಿಸಿದ 31,065 ಜನರಿಗೆ ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 8,816 ಜನರಿಗೆ ಜ್ವರ ತಪಾಸಣೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಈವರೆಗೆ 284 ಜನರಿಗೆ ಮಾನಸಿಕ ಆರೋಗ್ಯ ತಜ್ಞರಿಂದ ಮೂರ್ನಾಲ್ಕು ದಿನಗಳಿಗೊಮ್ಮೆ ಆಪ್ತ ಸಮಾಲೋಚನೆ ಮಾಡಿಸಲಾಗಿದೆ. ಜಿಲ್ಲೆಯಲ್ಲಿ ಸದ್ಯ 15 ಜನರನ್ನು ಸಾಂಸ್ಥಿಕ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.