ಚಿತ್ರದುರ್ಗ: ಕೊರೊನಾ ಹಾವಳಿಯನ್ನು ತಗ್ಗಿಸುವ ಸಲುವಾಗಿ ಸರ್ಕಾರ ಶಾಲಾ ಕಾಲೇಜುಗಳನ್ನು ತೆರೆಯದಂತೆ ಮಾರ್ಗಸೂಚಿಯೇನೋ ಹೊರಡಿಸಿದೆ. ಆದರೆ, ಮಕ್ಕಳ ಕಲಿಕಾ ಸಾಮರ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಆನ್ಲೈನ್ ಮೂಲಕ ನೀಡುವ ಶಿಕ್ಷಣದ ವ್ಯವಸ್ಥೆ ಬಗ್ಗೆ ರಾಜ್ಯ ಸರ್ಕಾರ ಅಷ್ಟಾಗಿ ಗಮನ ಹರಿಸಿಲ್ಲ ಎಂಬುವುದನ್ನು ಒತ್ತಿ ಹೇಳಬೇಕಿಲ್ಲ. ಇದಕ್ಕೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಗೋಳು ಹೊರತಾಗಿಲ್ಲ.
ಶಾಲಾ ಕಾಲೇಜುಗಳನ್ನು ತೆರೆಯದಂತೆ ಸರ್ಕಾರವೇನೋ ಮಾರ್ಗಸೂಚಿ ನೀಡಿ ಕೈ ತೊಳೆದುಕೊಂಡಿದೆ. ಅದರಂತೆ ಜಿಲ್ಲೆಯ ಸಾಕಷ್ಟು ಶಾಲಾ-ಕಾಲೇಜುಗಳು ಅನ್ಯ ಮಾರ್ಗವಿಲ್ಲದೇ ಆನ್ಲೈನ್ ಶಿಕ್ಷಣದ ಮೊರೆ ಹೋಗಿವೆ. ಆದರೆ, ಈ ವ್ಯವಸ್ಥೆಯಿಂದ ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳು ಸಮಸ್ಯೆಗಳ ಸುಳಿಯಲ್ಲಿ ಸಿಲುಕುವಂತಾಗಿದೆ. ಮೊಬೈಲ್ ಖರೀದಿ, ನೆಟ್ವರ್ಕ್ ಸಮಸ್ಯೆ, ಅದು-ಇದು ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಗ್ರಾಮೀಣ ಪ್ರತಿಭೆಗಳಿಗೆ ಆನ್ಲೈನ್ ಶಿಕ್ಷಣ ನುಂಗಲಾರದ ತುತ್ತಾಗಿದೆ. ಆನ್ಲೈನ್ ಶಿಕ್ಷಣ ತೆಗೆದುಕೊಳ್ಳಬೇಕು ಎಂದರೆ ದುಬಾರಿ ಬೆಲೆಯ ಮೊಬೈಲ್ ಖರೀದಿ ಮಾಡಬೇಕು. ಆದರೆ, ಇದು ಬಡ ಜನರಿಗೆ ಸಾಧ್ಯವಾಗದ ಕೆಲಸ. ಅಲ್ಲಿ-ಇಲ್ಲಿ ಹಣ ಸಂಗ್ರಹಿಸಿ ಮೊಬೈಲ್ ಖರೀದಿ ಮಾಡಿದರೂ ಸಹ ನೆಟ್ವರ್ಕ್ ಬರುವುದಿಲ್ಲ. ಬೆಟ್ಟ-ಗುಡ್ಡದ ಮೇಲೆ ಹತ್ತಿ ಪಾಠ ಕೇಳಬೇಕು, ಇಲ್ಲವೇ ಅವರಿವರ ಮನೆ ಮೇಲೆ ಹತ್ತಬೇಕು. ಎಷ್ಟು ದಿನ ಅಂತ ಹೀಗೆ ಮಾಡುವುದು?
ಈ ಕಾರಣದಿಂದಲೇ ಸಾಕಷ್ಟು ವಿದ್ಯಾರ್ಥಿಗಳು ಆನ್ಲೈನ್ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದರಿಂದ ಗ್ರಾಮೀಣ ಪ್ರತಿಭೆಗಳ ಕಲಿಕಾ ಸಾಮರ್ಥ್ಯ ಮೇಲೆ ಪೆಟ್ಟು ಬೀಳುತ್ತಿದೆ. ಆನ್ಲೈನ್ನಲ್ಲಿ ನೀಡುವ ಪಾಠ ಅಷ್ಟಾಗಿ ಅರ್ಥವಾಗುವುದಿಲ್ಲ, ಇಲ್ಲಿ ನಮ್ಮ ಡೌಟ್ಗಳನ್ನು ಬಗೆಹರಿಸಿಕೊಳ್ಳುವುದು ಆಗದು. ಪದೇ ಪದೆ ಶಿಕ್ಷಕ ಅಥವಾ ಶಿಕ್ಷಕಿಯರಿಗೆ ಈ ಬಗ್ಗೆ ಕರೆ ಮಾಡಿ ಕೇಳಬೇಕಾಗುತ್ತದೆ. ಆದರೆ, ಇದು ಅಷ್ಟು ಸಮಂಜಸವಲ್ಲ. ಆದ್ದರಿಂದ ಆದಷ್ಟು ಬೇಗನೇ ಸರ್ಕಾರ ಶಾಲಾ-ಕಾಲೇಜುಗಳನ್ನು ತೆರೆಯಬೇಕು, ಇದಕ್ಕೊಂದು ಮುಕ್ತಿ ನೀಡಬೇಕು ಎನ್ನುತ್ತಾರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು.