ಚಿತ್ರದುರ್ಗ: ಕೋವಿಡ್-19 ನಿಯಂತ್ರಣದ ಜೊತೆ-ಜೊತೆಗೆ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ಕೃಷಿ, ವಾಣಿಜ್ಯ,ಆರ್ಥಿಕ ಚಟುವಟಿಕೆಗಳು ಮೊದಲಿನಂತೆ ನಿರಂತರವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸೇರಿದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ಸೂಚಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜೂನ್ 1ರ ನಂತರ ಲಾಕ್‍ಡೌನ್ ಸಡಿಲಿಕೆ ಆಗಲಿದ್ದು, ಹೋಟೆಲ್ ಉದ್ಯಮ ಸೇರಿದಂತೆ ಕೈಗಾರಿಕೆಗಳು ಆರಂಭವಾಗುವ ನಿರೀಕ್ಷೆಯಿದೆ. ಇದಕ್ಕೆ ಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಬೇಕು. ಜೊತೆಗೆ ಅಭಿವೃದ್ಧಿ ಕಾರ್ಯಗಳು ಎಂದಿನಂತೆ ಮುಂದುವರೆದು ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ನಡೆಯಬೇಕಿದೆ.
ಜಿಲ್ಲೆಯ ಜನರಿಗೆ ಆರೋಗ್ಯ ತಪಾಸಣೆಗೆ ತೊಂದರೆಯಾಗದಂತೆ ಎಲ್ಲಾ ಕ್ಲಿನಿಕ್,ನರ್ಸಿಂಗ್ ಹೋಂಗಳನ್ನ ಕಡ್ಡಾಯವಾಗಿ ತೆರೆಯಬೇಕು. ಒಂದು ವೇಳೆ ತೆರೆಯದಿದ್ದರೆ, ಜಿಲ್ಲಾ ಆರೋಗ್ಯ ಅಧಿಕಾರಿಗಳು ಸಂಬಂಧಪಟ್ಟವರಿಗೆ ನೋಟಿಸ್ ನೀಡಬೇಕು. 65 ವರ್ಷ ಮೇಲ್ಪಟ್ಟ ವೈದ್ಯರಿಗೆ ಅಗತ್ಯವಿದ್ದಲ್ಲಿ ವಿನಾಯಿತಿ ಇರುತ್ತದೆ. ಬಾಕಿ ಎಲ್ಲ ಆಸ್ಪತ್ರೆ, ಕ್ಲಿನಿಕ್‍ಗಳು ತೆರೆಯಬೇಕು ಎಂದು ತಿಳಿಸಿದರು.