ಚಿತ್ರದುರ್ಗ : ಭೋವಿ, ಕೊರಚ, ಕೊರಮ, ಲಂಬಾಣಿ ಸಮುದಾಯಗಳನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡಲಾಗಿದೆ ಎಂದು ಕೆಲವರು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಭೋವಿ ಗುರು ಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಭೋವಿ ಮಠದಲ್ಲಿ ಮಾತನಾಡಿದ ಶ್ರೀ, ಭೋವಿ, ಕೊರಚ, ಕೊರಮ, ಲಂಬಾಣಿ, ಸಮುದಾಯಗಳನ್ನು ಪರಿಶಿಷ್ಟ ಜಾತಿಯಿಂದ ಕೈ ಬಿಡಬೇಕೆಂದು ಹಲವು ವರ್ಷಗಳಿಂದ ಹೋರಾಟಗಳು ನಡೆಯುತ್ತಿವೆ. ಈ ಸಂಬಂಧ ಕೆಲವರು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ನ್ಯಾಯಾಲಯ, ಪ್ರಕರಣವನ್ನು ಕರ್ನಾಟಕ ರಾಜ್ಯ ನ್ಯಾಷನಲ್ ಕಮಿಷನ್ ಆಫ್ ಶೆಡ್ಯುಲ್ ಕ್ಯಾಸ್ಟ್ಗೆ ಹಸ್ತಾಂತರಿಸಿ ಕ್ರಮಕೈಗೊಳ್ಳುವಂತೆ ಸೂಚಿಸಿದೆ. ಇದನ್ನೇ ಕೆಲವರು ಮೀಸಲು ರದ್ದುಗೊಳಿಸಿರುವುದಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದರು.
ಜನರಿಗೆ ತಪ್ಪು ಮಾಹಿತಿ ನೀಡದಂತೆಯೂ ಇದೇ ವೇಳೆ ಸ್ವಾಮೀಜಿ ಮನವಿ ಮಾಡಿಕೊಂಡರು.